ಕುಂದಾಪುರ ಉಪವಿಭಾಗಾಧಿಕಾರಿ ಕೆ.ಮಹೇಶ್ಚಂದ್ರ ಸೇವೆಯಿಂದ ಅಮಾನತು

Update: 2025-03-30 19:41 IST
ಕುಂದಾಪುರ ಉಪವಿಭಾಗಾಧಿಕಾರಿ ಕೆ.ಮಹೇಶ್ಚಂದ್ರ ಸೇವೆಯಿಂದ ಅಮಾನತು

ಮಹೇಶ್‌ಚಂದ್ರ

  • whatsapp icon

ಉಡುಪಿ, ಮಾ.30: ಸರಕಾರದ ಆದೇಶದಂತೆ ಕುಂದಾಪುರ ಉಪವಿಭಾಗದ ಉಪವಿಭಾಗಾಧಿಕಾರಿ ಯಾಗಿರುವ ಕಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಕೆ.ಮಹೇಶ್ಚಂದ್ರ ಇವರ ವಿರುದ್ಧದ ಇಲಾಖಾ ವಿಚಾರಣೆ ಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ಈ ಅಧಿಕಾರಿಯವರ ಲೀನ್‌ನ್ನು ಕೌನ್ಸಿಲ್ ಕಾರ್ಯದರ್ಶಿ ಕಲಬುರಗಿ ನಗರ ಕಾರ್ಪೋರೇಷನ್ ಕಲಬುರಗಿ ಇಲ್ಲಿಗೆ ವರ್ಗಾಯಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಹೀಗಾಗಿ ಸರಕಾರದ ಆದೇಶದಂತೆ ಈ ಅಧಿಕಾರಿಯನ್ನು ಕುಂದಾಪುರ ಉಪವಿಭಾಗಾಧಿಕಾರಿ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಅಲ್ಲದೇ ಕುಂದಾಪುರ ಉಪವಿಭಾಗದ ಉಪವಿಭಾಗಾಧಿಕಾರಿ ಹುದ್ದೆಯ ಪ್ರಭಾರವನ್ನು ಈಗ ಬ್ರಹ್ಮಾವರ ತಾಲೂಕಿನ ತಹಶೀಲ್ದಾರ್ ಆಗಿರುವ ಶ್ರೀಕಾಂತ್ ಎಸ್.ಹೆಗ್ಡೆ ಇವರಿಗೆ ವಹಿಸಿ ಮುಂದಿನ ಆದೇಶದವರೆಗೆ ಹೆಚ್ಚುವರಿಯಾಗಿ ನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಮಹೇಶ್ಚಂದ್ರ ಅವರ ಅಮಾನತಿಗೆ ಹಲವು ಕಾರಣಗಳನ್ನು ನೀಡಲಾಗಿದೆ. ಕರ್ತವ್ಯ ಲೋಪ, ಕೆಲಸದಲ್ಲಿ ವಿಳಂಬ, ಮೇಲಾಧಿಕಾರಿಗಳು ನೀಡಿದ ಆದೇಶಗಳನ್ನು ಪಾಲಿಸದಿರುವುದು, ಹಲವು ವಿಷಯದಲ್ಲಿ ಜಿಲ್ಲಾಡಳಿತಕ್ಕೆ ಮುಜುಗರದ ಸನ್ನಿವೇಶ ಉಂಟಾಗುವಂತೆ ಮಾಡಿರುವುದು, ಜಿಲ್ಲೆಯಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಜಮೀನಿನ ಪರಿಹಾರ ಮೊತ್ತವನ್ನು ಭೂಮಾಲಿಕರಿಗೆ ಪಾವತಿಸಲು ಹಾಗೂ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಬಾಕಿ ಉಳಿಸಿರುವುದು ಅವರ ಅಮಾನತಿಗೆ ಕಾರಣಗಳಲ್ಲಿ ಸೇರಿವೆ.

ಕಚೇರಿಗೆ ಆಗಮಿಸುವ ಸಾರ್ವಜನಿಕರನ್ನು ಭೇಟಿಯಾಗದೇ, ಅವರಿಗೆ ಸರಿಯಾಗಿ ಸ್ಪಂದಿಸದೇ, ಕಚೇರಿಯ ಸಿಬ್ಬಂದಿಗಳನ್ನು ಭೇಟಿಯಾಗುವಂತೆ ಸೂಚಿಸುವುದು, ಸರಕಾರಿ ಕೆಲಸಗಳಲ್ಲಿ ನಿರ್ಲಕ್ಷ್ಯತನದ ಧೋರಣೆ, ಮೇಲಾಧಿಕಾರಿಗಳ ಆದೇಶವನ್ನು ಪಾಲಿಸದೇ ಕರ್ತವ್ಯ ಲೋಪ ಎಸಗುತ್ತಿರುವುದು, ಸರಕಾರದ ಧೋರಣೆಗಳಿಗೆ ವಿರುದ್ಧವಾಗಿ ಕಾರ್ಯಪೆಸಗು ತ್ತಿರುವುದು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ ಕಾರ್ಯಗಳನ್ನು ಮಾಡುತ್ತಿರುವುದು ಅಮಾನತಿಗೆ ಕಾರಣವೆಂದು ಹೇಳಲಾಗಿದೆ.

ಮಹೇಶ್ಚಂದ್ರ ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಗಿದ್ದ ಸಂದರ್ಭದಲ್ಲಿ ತಾಲೂಕಿನ ಬಡಾನಿಡಿಯೂರು ಗ್ರಾಮದಲ್ಲಿ 0.90 ಎಕರೆ ಜಾಗದಲ್ಲಿರುವ ವಾಣಿಜ್ಯ ಉದ್ದೇಶದ ರೆಸಾರ್ಟ್ ನಿರ್ಮಾಣದ ವಿಚಾರದಲ್ಲಿ ಉದ್ಯಾನವನ ಮತ್ತು ಬಯಲು ಜಾಗದ ವಲಯದಿಂದ ವಾಣಿಜ್ಯ ವಲಯಕ್ಕೆ ಭೂಉಪಯಗ ಬದಲಾವಣೆಯ ಕಡತದಲ್ಲಿ ಸರಕಾರಿ ದಾಖಲೆಗಳನ್ನು ನಿಯಮ ಮೀರಿ ನಕಲಿಯಾಇ ಸೃಷ್ಟಿಸಿರುವ ಬಗ್ಗೆ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಉಡುಪಿ ಶಾಸಕರು ಮನವಿ ಮಾಡಿದ್ದು, ಸದರಿ ವಿಷಯ ಗಳ ಕುರಿತು ಸೂಕ್ತ ಸಮಜಾಯಿಷಿ ನೀಡುವಂತೆ ನೋಟೀಸು ನೀಡಲಾಗಿದ್ದರೂ, ಸೂಕ್ತ, ತೃಪ್ತಿಕರ ಸಮಜಾಯಿಷಿ ನೀಡದೇ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ. ಇದರಿಂದ ಜಿಲ್ಲಾಡಳಿತಕ್ಕೆ ಮುಜುಗುರ ಉಂಟಾಗಿದೆ ಎಂದು ಜಿಲ್ಲಾಧಿಕಾರಿಗಳು ಸರಕಾರಕ್ಕೆ ನೀಡಿದ ವರದಿಯಲ್ಲಿ ತಿಳಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ವಲಯದ ವತಿಯಿಂದ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಲ್ಲಿ ಉದ್ಭವಿಸಿರುವ ಭೂಸ್ವಾಧೀನ ಹಾಗೂ ಇನ್ನಿತರ ಸಮಸ್ಯೆಗಳ ಇತ್ಯರ್ಥಕ್ಕಾಗಿ ಲೋಕೋಪಯೋಗಿ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಕರೆದ ಸಭೆಯಲ್ಲಿ ನೀಡಲಾದ ಸೂಚನೆಗಳನ್ನು ಪಾಲಿಸದೇ ಇರುವುದು. ಜಿಲ್ಲೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪಡಿಸಲಾ ಗುತ್ತಿರುವ ವಿವಿಧ ರಾ.ಹೆದ್ದಾರಿ ಯೋಜನೆಗಳ ಜಮೀನಿನ ಪರಿಹಾರ ಮೊತ್ತವನ್ನು ಭೂಮಾಲಕರಿಗೆ ಪಾವತಿಸಲು ಹಾಗೂ ಜಮೀನನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಬಾಕಿ ಇರಿಸಿದ್ದಾರೆ.

ಪಡುಬಿದ್ರಿಯ ಸುಜ್ಲಾನ್ ಕಂಪೆನಿ ವಿರುದ್ಧ ಸಾರ್ವಜನಿಕರಿಗೆ ಸ್ವೀಕರಿಸಿದ ದೂರುಗಳನ್ನು ಪರಿಶೀಲಿಸಿ ವರದಿ ನೀಡುವಂತೆ ರಚಿಸಿದ ಸಮಿತಿಯ ಅಧ್ಯಕ್ಷರಾಗಿ ವರದಿಯನ್ನು ಸಲ್ಲಿಸದೇ ಇರುವುದು, ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಿಂದ ರಚಿಸಲಾದ ಉಪಸಮಿತಿಯ ಅಧ್ಯಕ್ಷರಾಗಿ ಬಿಡ್ಡುದಾರರಲ್ಲಿ ಗೊಂದಲ ಉಂಟು ಮಾಡಿ ಸಾರ್ವಜನಿಕ ವಲಯದಲ್ಲಿ ಜಿಲ್ಲಾಡಳಿತ, ಸರಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿರುವುದನ್ನು ಎಸಿ ವಿರುದ್ಧದ ಅಮಾನತಿಗೆ ಕಾರಣಗಳಾಗಿ ನೀಡಲಾಗಿದೆ.

ಜಿಲ್ಲಾಧಿಕಾರಿಯವರು ನೀಡಿರುವ ವರದಿಯನ್ನು ಪರಿಶೀಲಿಸಿದಾಗ ಅಧಿಕಾರಿ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಅಧಿಕಾರಿಯವರ ವಿರುದ್ಧ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತು ಪಡಿಸಲು ತೀರ್ಮಾನಿಸಿ ಸರಕಾರದ ಅಧೀನ ಕಾರ್ಯದರ್ಶಿಗಳು ಮಾ.29ರಂದು ಆದೇಶ ಹೊರಡಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News