ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಅನುದಾನ ಸಮರ್ಪಕ ಬಳಕೆಯಾಗಲಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಹೀಂ ಖಾನ್

Update: 2024-08-17 14:22 GMT

ಉಡುಪಿ: ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರಕಾ ವಿವಿಧ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆ ಗಳಿಗೆ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿಶತ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಶನಿವಾರ ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಕರಾವಳಿ ಭಾಗದಲ್ಲಿರುವ ಸ್ಥಳೀಯ ಸಂಸ್ಥೆಗಳು ಇತರೆ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸರಕಾರದ ಮಾರ್ಗಸೂಚಿಯನ್ವಯ ವಿಳಂಬ ಲ್ಲದೇ ಅನುದಾನವನ್ನು ಪೂರ್ಣ ಪ್ರಮಾಣ ದಲ್ಲಿ ಬಳಕೆಮಾಡಿಕೊಳ್ಳುವಂತೆ ತಿಳಿಸಿದ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಇಲಾಖೆ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.

ಆಸ್ತಿ ತೆರಿಗೆ ವಸೂಲಾತಿಯಲ್ಲಿ ಬೈಂದೂರು ಹಾಗೂ ಕುಂದಾಪುರಗಳ ಸ್ಥಳೀಯ ಸಂಸ್ಥೆಗಳು ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ಹಿಂದೆ ಬಿದ್ದಿವೆ. ತೆರಿಗೆ ಹಣವನ್ನು ಆದ್ಯತೆ ಮೇಲೆ ವಸೂಲಿ ಮಾಡಬೇಕು ಎಂದ ರಹೀಂ ಖಾನ್, ಮಾಲಕರು ಮನೆಗಳ ನಿರ್ಮಾಣ ಸಂದರ್ಭದಲ್ಲಿ ಇರುವ ಕಟ್ಟಡಕ್ಕೆ ತೆರಿಗೆಯನ್ನು ಮೊದಲೇ ಎರಡು-ಮೂರು ವರ್ಷಗಳಿಗೆ ಕಟ್ಟಿರುತ್ತಾರೆ. ನಂತರ ಅವುಗಳನ್ನು ವಿಸ್ತರಣೆ ಮಾಡಿ, ಮೊದಲನೆ, ಎರಡನೇ ಮಹಡಿ ವಿಸ್ತೀರ್ಣ ಹೆಚ್ಚಿಸಿದರೂ ಸಹ ಹಳೆಯ ಕಟ್ಟಡದ ತೆರಿಗೆಯನ್ನೇ ಪಾವತಿ ಮಾಡುತ್ತಿರುತ್ತಾರೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಂಚನೆ ಯಾಗುತ್ತದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಶೀಲನೆ ಮಾಡಿ, ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆ ವಸೂಲಿ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಡೆಂಗಿ ರೋಗದ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಸ್ಥಳೀಯ ಸಂಸ್ಥೆ ಗಳು ತೆಗೆದುಕೊಳ್ಳಬೇಕು. ಸಾರ್ವಜನಿಕರಿಗೆ ಅರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳು ಉತ್ಪಾದನೆ ಆಗದಂತೆ ಕ್ರಮ ವಹಿಸಬೇಕು. ಪ್ರತಿ ಶುಕ್ರವಾರ ಡ್ರೈ ಡೇ ಆಚರಣೆಗೆ ಹೆಚ್ಚಿನ ಒತ್ತು ನೀಡ ಬೇಕು. ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಸಮನ್ವಯದೊಂದಿಗೆ ಈ ಎಲ್ಲಾ ಕಾರ್ಯಗಳನ್ನು ಮಾಡಬೇಕು ಎಂದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆದ್ಯತೆ ನೀಡಿ: ಪಾರಂಪರಿಕ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲು ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಅನುದಾನ ನೀಡಲಾಗಿದೆ. ಇದಕ್ಕೆ ಅಗತ್ಯರುವ ಭೂಮಿಯನ್ನು ಗುರುತಿಸಿ, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿ ವಿಲೇವಾರು ಘಟಕದ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಮುಂದಿನ ದಿನಗಳಲ್ಲಿ ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಪು ಮತ್ತು ಕಾರ್ಕಳ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಮೃತ್ ಯೋಜನೆ ಯಡಿ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿ ಈಗಾಗಲೇ ಚಾಲ್ತಿಯಲ್ಲಿದ್ದು, ಶೇ.50ರಷ್ಟು ಕಾಮಗಾರಿಗಳು ಆಗಿವೆ. ಇವುಗಳನ್ನು ಗುಣಮಟ್ಟದೊಂದಿಗೆ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಅನುಷ್ಠಾನಗೊಳಿಸುತ್ತಿರುವ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

15ನೇ ಹಣಕಾಸಿನಲ್ಲಿ ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯ ಗಳನ್ನು ಕಲ್ಪಿಸ ಬೇಕು. ಬೈಂದೂರು ಸ್ಥಳೀಯ ಸಂಸ್ಥೆ ಅನುಷ್ಠಾನದಲ್ಲಿ ತುಂಬಾ ಹಿಂದಿದೆ. ಆದ್ಯತೆಯ ಮೇಲೆ ಇದನ್ನು ಕೈಗೊಳ್ಳಬೇಕು ಎಂದವರು ಸೂಚಿಸಿದರು.

ಶೀಘ್ರ ಮಾರ್ಗಸೂಚಿ: ಬಡವರು ಸ್ಥಳೀಯ ಸಂಸ್ಥೆ ಹಾಗೂ ಪ್ರಾಧಿಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಕಟ್ಟಡ ಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿರುತ್ತಾರೆ. ಅವರು ಅಗತ್ಯ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್‌ಚ್ಛಕ್ತಿ, ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳಿಂದ ವಂಚಿತರಾಗಿರುವುದು ಕಂಡು ಬರುತ್ತಿವೆ. ಸರಕಾರ ಇವರುಗಳಿಂದ ಒಂದು ಬಾರಿ ಬಾಕಿ ಇರುವ ತೆರಿಗೆಯನ್ನು ಪಡೆಯಲು ಶೀಘ್ರವೇ ಮಾರ್ಗಸೂಚಿಯನ್ನು ಹೊರಡಿಸಲಿದೆ. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಕಟ್ಟಡಗಳು ಮತ್ತು ಜಾಗದ ತೆರಿಗೆಯ ವಸೂಲಾತಿಯನ್ನು ಸ್ಥಳೀಯ ಮಹಿಳಾ ಸಂಘಗಳ ಮೂಲಕ ವಸೂಲಿ ಮಾಡಲು ಸರಕಾರ ಈಗಾಗಲೇ ಸೂಚನೆ ನೀಡಿದೆ. ಸ್ಥಳೀಯ ಸಂಸ್ಥೆಗಳು ಮಹಿಳಾ ಸಂಘವನ್ನು ಬಳಸಿಕೊಂಡು ನೀರಿನ ತೆರಿಗೆ ಸೇರಿದಂತೆ ಇತರೆ ತೆರಿಗೆಯನ್ನು ವಸೂಲಿ ಮಾಡಬೇಕು. ಸರಕಾರ ನಿಗದಿಪಡಿಸಿರುವ ಶುಲ್ಕವನ್ನು ಅವರಿಗೆ ನೀಡಬೇಕು ಎಂದ ಖಾನ್, ಉದ್ದಿಮೆದಾರರಿಗೆ ಸ್ಥಳೀಯ ಸಂಸ್ಥೆಗಳು 5 ವರ್ಷಕ್ಕೊಮ್ಮೆ ಪರವಾನಿಗೆ ನೀಡಲು ಸರಕಾರ ಆದೇಶ ನೀಡಿದೆ. ಈ ಬಗ್ಗೆ ಅವರಲ್ಲಿ ಅರಿವು ಮೂಡಿಸಿ 5 ವರ್ಷ ಕಾಲಾವಧಿಗೆ ಪರವಾನಿಗೆ ಮಾಡಿ ಕೊಡಲು ಮುಂದಾಗ ಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ, ಆಪ್ತ ಕಾರ್ಯದರ್ಶಿ ಡಾ.ಕೆ ಮುರುಳಿಧರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದಿರಾ ಕ್ಯಾಂಟಿನ್‌ನಲ್ಲಿ ಸಿಸಿಟಿವಿ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆಗೆ ಮೊದಲೇ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಕಾರ ನಿಗದಿಪಡಿಸಿರುವ ಗುಣಮಟ್ಟದಲ್ಲಿ ವಿತರಣೆ ಆಗುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕ್ಯಾಂಟೀನ್‌ಗಳಿಗೂ ಸಿ.ಸಿ.ಟಿ.ವಿ ಅಳವಡಿಕೆ ಮಾಡಲು ಈಗಾಗಲೇ ಆದೇಶ ಮಾಡಲಾಗಿದೆ. ಅದನ್ನು ಅಳವಡಿಸಬೇಕು. ಆಗ ಮಾತ್ರ ನಿಖರವಾಗಿ ಎಷ್ಟು ಜನರಿಗೆ ಆಹಾರ ವಿತರಣೆ ಆಗಿವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಸಾಧ್ಯ. ಇದಕ್ಕೆ ವಿಶೇಷ ಒತ್ತು ನೀಡಬೇಕು ಎಂದರು.






 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News