ಬೆಲೆ ಏರಿಕೆ ದಿನಗಳಲ್ಲಿ ಗ್ಯಾರಂಟಿ ಯೋಜನೆಯಿಂದ ಮಹಿಳೆಯರ ಮುಖದಲ್ಲಿ ಮಂದಹಾಸ: ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಮಹಿಳೆಯರ ಮುಖದಲ್ಲಿ ಮಂದಾಸ ತರಲು ರಾಜ್ಯ ಸರಕಾರ ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಎಲ್ಲ ಮಹಿಳೆಯರು ಇದರ ಲಾಭ ಪಡೆಡು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾ ಯತ್ ಉಡುಪಿ, ನಬಾರ್ಡ್ ಕರ್ನಾಟಕ, ಉಡುಪಿ ತಾಲೂಕು ಸಂಜೀವಿನಿ ಒಕ್ಕೂಟ, ಪ್ರಗತಿ ಸಂಜೀವಿನಿ ಗ್ರಾಮ ಪಂಚಾ ಯತ್ ಮಟ್ಟದ ಒಕ್ಕೂಟ, ಚೇರ್ಕಾಡಿ ಸಮೃದ್ಧಿ ಸಂಜೀವಿನಿ ಸ್ವ-ಸಹಾಯ ಗುಂಪಿನ ಸದಸ್ಯರು ಇವುಗಳ ಸಹಯೋಗದಲ್ಲಿ ಉಡುಪಿ ತಾಪಂ ಕಟ್ಟಡದಲ್ಲಿ ನೂತನವಾಗಿ ಆರಂಭಿಸಲಾದ ಸಂಜೀವಿನಿ ಸೂಪರ್ ಮಾರ್ಕೆಟ್‌ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಾಜ್ಯ ಸರಕಾರ ಮಹಿಳೆಯರನ್ನು ಆರ್ಥಿಕವಾಗಿ ಬಲಿಷ್ಠಗೊಳಿಸಿ ಸ್ವಾವಲಂಬಿ ಗಳಾಗಿ ಮಾಡಲು ಗ್ಯಾರಂಟಿ ಯೋಜನೆ ಗಳನ್ನು ಜಾರಿಗೆ ತಂದಿದೆ. ನಮಗೆ ಈ ವಿಚಾರದಲ್ಲಿ ರಾಜಕೀಯ ಮಾಡುವ ಯಾವುದೇ ಉದ್ದೇಶ ಇಲ್ಲ. ಚುನಾವಣೆ ಇದ್ದಾಗ ಮೂರು ತಿಂಗಳು ಮಾತ್ರ ರಾಜಕಾಣ ಮಾಡುತ್ತೇವೆ. ಉಳಿದ ವರ್ಷ ಕೇವಲ ಪ್ರಗತಿಯ ರಾಜಕಾರಣ ಮಾಡುತ್ತೇನೆ ಎಂದರು.
ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿಕ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಇಂದು ಮಹಿಳೆಯರು ಮುಂದೆ ಬರುತ್ತಿದ್ದಾರೆ. ಮಹಿಳೆಯರು ಮನೆಮಂದಿಯ ಆರೋಗ್ಯ, ಹಣಕಾಸಿನ ಸ್ಥಿತಿಗತಿ ಮಧ್ಯೆ ಮನೆ ಕೆಲಸ ಮಾಡಿಕೊಂಡು ಸ್ವಸಹಾಯ ಸಂಘ ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದು ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ನಮ್ಮ ಮಹಿಳೆಯರ ಕೌಶಲ್ಯ ಜಗತ್ತಿನ ಯಾವ ಮೂಲೆಗಳನ್ನು ಕಾಣಲು ಸಾಧ್ಯವಿಲ್ಲ. ಅವರಿಗೆ ನಾವು ಇನ್ನು ಹೆಚ್ಚಿನ ಶಕ್ತಿ, ತರಬೇತಿ ಹಾಗೂ ಪ್ರೋತ್ಸಾಹ ಕೊಡಬೇಕಾಗಿದೆ. ಅದಕ್ಕೆ ನಮ್ಮ ಸರಕಾರ ಬದ್ಧವಾಗಿದೆಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ಹೆಬ್ರಿ ಗ್ರಾಪಂ ಮಟ್ಟದ ಒಕ್ಕೂಟ ಕಲ್ಪವೃಕ್ಷ ಸಂಜೀವಿನಿ ಸ್ವಸಹಾಯ ಸಂಘಗಳ ತಯಾರಿ ಸಿದ ಜೇನುತುಪ್ಪ ‘ಹೆಬ್ರಿ ಹನಿ’ ಬ್ರ್ಯಾಂಡ್ ಅನಾವರಣಗೊಳಿಸಿದರು. ನಬಾರ್ಡ್ ಜಿಲ್ಲಾ ಡೆವಲಪ್‌ಮೆಂಟ್ ಮೆನೇಜರ್ ಸಂಗೀತ ಕಾರ್ತ ಸಂಜೀವಿನಿ ಮಾರ್ಕೆಟ್‌ಗೆ ಅನುದಾನ ಒದಗಿಸಿದ ರೂರಲ್ ಮಾರ್ಟ್ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಎಸ್ಪಿ ಅಕ್ಷಯ್ ಹಾಕೇ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ, ತೋಟ ಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಮೊದಲಾದವರು ಉಪಸ್ಥಿತರಿ ದ್ದರು. ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಮಿತಾ ಹಾಗೂ ನವ್ಯಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಗಾಂಧಿ ಕಲಾಕೃತಿ ಖರೀದಿಸಿದ ಸಚಿವೆ
ಸಂಜೀವಿನಿ ಸೂಪರ್ ಮಾರ್ಕೆಟ್ ಉದ್ಘಾಟಿಸಿದ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಲ್ಲಿರುವ ಎಲ್ಲ ವಸ್ತುಗಳನ್ನು ನೋಡಿ ಖುಷಿಪಟ್ಟರು. ಪ್ರತಿಯೊಂದು ವಸ್ತುಗಳ ಬಗ್ಗೆ ಸಂಜೀವಿನಿ ಸದಸ್ಯರಿಂದ ವಿಚಾರಿಸಿದರು. ಬಳಿಕ ತನ್ನ ಕಣ್ಣಿಗೆ ಬಿದ್ದ ತೆಂಗಿನ ಚಿಪ್ಪಿನಿಂದ ತಯಾರಿಸಿದ ಗಾಂಧೀಜಿಯ ಕಲಾಕೃತಿಯನ್ನು ಅದರ ಮುಖಬೆಲೆ 4000 ರೂ. ಪಾವತಿಸಿ ಖರೀದಿಸಿದರು.
‘ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಗಾಂಧೀಜಿಯ ತೆಂಗಿನ ಚಿಪ್ಪಿನಿಂದ ತಯಾರಿಸಿದ ಕಲಾಕೃತಿಯನ್ನು ನನ್ನ ಕಣ್ಣು ಸೆಳೆಯಿತು. ನಾನು ಒಂದು ಕ್ಷಣವೂ ಯೋಚನೆ ಮಾಡದೆ ಅದನ್ನು ಖರೀದಿಸಿದೆ. ಅವರ ಬದುಕೇ ನಮಗೆ ಸಂದೇಶವಾಗಿದೆ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.