ಉಡುಪಿ ಜಿಲ್ಲೆಯಾದ್ಯಂತ ಮುಂದುವರಿದ ಭಾರೀ ಗಾಳಿಮಳೆ

Update: 2023-07-23 14:44 GMT

ಉಡುಪಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆ ರವಿವಾರವೂ ಮುಂದುವರೆದಿದೆ. ಇದರಿಂದ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳು ಜಲಾವೃತ್ತಗೊಂಡು, ನೂರಾರು ಮನೆಗಳಿಗೆ ಹಾನಿಯಾಗಿ ರುವ ಬಗ್ಗೆ ವರದಿಯಾಗಿದೆ.

ಜು.28ರವರೆಗೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜು.25ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶನಿವಾರ ಸಂಜೆಯಿಂದ ಬಿರುಸುಗೊಂಡ ಮಳೆಯು ರಾತ್ರಿ ಭಾರೀ ಗಾಳಿಯೊಂದಿಗೆ ಸುರಿದಿದೆ. ರವಿವಾರ ಬೆಳಗ್ಗೆ ಕೂಡ ಭಾರೀ ಮಳೆ ಯಾಗಿದ್ದು, ಸಂಜೆ ವೇಳೆ ಮಳೆ ಪ್ರಮಾಣ ತುಳು ಇಳಿಕೆಯಾಗಿದೆ.

ಕಳೆದ 24ಗಂಟೆ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 163.9ಮಿ.ಮೀ. ಮಳೆಯಾಗಿದೆ. ಕಾರ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 231.3ಮಿ.ಮೀ. ಮಳೆಯಾದರೆ, ಕುಂದಾಪುರ ತಾಲೂಕಿನಲ್ಲಿ ಅತಿ ಕಡಿಮೆ ಅಂದರೆ 117.6ಮಿ. ಮೀ. ಮಳೆಯಾಗಿದೆ. ಉಳಿದಂತೆ ಉಡುಪಿ- 201.6ಮಿ.ಮೀ., ಬ್ರಹ್ಮಾವರ -156.0ಮಿ.ಮೀ., ಕಾಪು-181.6ಮಿ.ಮೀ., ಬೈಂದೂರು- 117.6ಮಿ.ಮೀ., ಹೆಬ್ರಿ-171.3ಮಿ.ಮೀ. ಆಗಿರುವ ಬಗ್ಗೆ ವರದಿಯಾಗಿದೆ.

41 ಮನೆಗಳಿಗೆ ಅಪಾರ ಹಾನಿ

ಕಳೆದ ರಾತ್ರಿ ಸುರಿದ ಭಾರೀ ಗಾಳಿಮಳೆಯಿಂದ ಉಡುಪಿ ಜಿಲ್ಲೆಯಾದ್ಯಂತ ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದು ಒಟ್ಟು 41 ಮನೆಗಳಿಗೆ ಹಾನಿ ಯಾಗಿದ್ದು, ಇದರಿಂದ ಒಟ್ಟು 16.61ಲಕ್ಷಶ ರೂ, ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಕುಂದಾಪುರ ತಾಲೂಕಿನ 9 ಮನೆಗಳಿಗೆ ಹಾನಿಯಾಗಿ ಒಟ್ಟು 2.25ಲಕ್ಷ ರೂ., ಬ್ರಹ್ಮಾವರ ತಾಲೂಕಿನಲ್ಲಿ ಮೂರು ಮನೆಗಳಿಗೆ ಹಾನಿಯಾಗಿ ಒಟ್ಟು 1.35ಲಕ್ಷ ರೂ., ಬೈಂದೂರು ತಾಲೂಕಿನ 9 ಮನೆಗಳಿಗೆ ಹಾನಿಯಾಗಿ ಒಟ್ಟು 3.55ಲಕ್ಷ ರೂ., ಕಾಪು ತಾಲೂಕಿನಲ್ಲಿ ಏಳು ಮನೆಗಳಿಗೆ ಹಾನಿಯಾಗಿ ಒಟ್ಟು 3.15ಲಕ್ಷ ರೂ., ಕಾರ್ಕಳ ತಾಲೂಕಿನಲ್ಲಿ ಏಳು ಮನೆಗಳಿಗೆ ಹಾನಿಯಾಗಿ ಒಟ್ಟು 1.96ಲಕ್ಷ ರೂ., ಉಡುಪಿ ತಾಲೂಕಿನ ಆರು ಮನೆಗಳಿಗೆ ಹಾನಿಯಾಗಿ 4.35ಲಕ್ಷ ರೂ. ನಷ್ಟ ಸಂಭವಿಸಿದೆ.

ಅದೇ ರೀತಿ ಹಳ್ಳಿಹೊಳೆ ಗ್ರಾಮದ ಕಬ್ಬಿನಾಲೆಯ ರಂಗ ಹಸಲ ಎಂಬವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಸುಮಾರು 250 ಅಡಿಕೆ ಮರಗಳಿಗೆ ಹಾನಿ ಯಾಗಿದ್ದು, ಇದರಿಂದ ಅಂದಾಜು 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದ ತುಂಗ ಎಂಬವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು, ಕೊಟ್ಟಿಗೆ ಹಾನಿಯಾಗಿದ್ದು, ಇದರಿಂದ 20000ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

230 ವಿದ್ಯುತ್ ಕಂಬ ಧರೆಗೆ: ವಿದ್ಯುತ್ ವ್ಯತ್ಯಯ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದ ಜಿಲ್ಲೆಯಾದ್ಯಂತ ಒಟ್ಟು 230 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, 14 ಟ್ರಾನ್ಸ್ ಫಾರ್ಮರ್‌ಗಳು ಮತ್ತು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಇದರಿಂದ ಒಟ್ಟು 30-40ಲಕ್ಷ ರೂ. ನಷ್ಟ ಉಂಟಾಗಿದೆ. 

ಇದರ ಪರಿಣಾಮ ಬೈಂದೂರು, ಕುಂದಾಪುರ ಹಾಗೂ ಕಾಪು ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇವುಗಳ ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಪಿ.ದಿನೇಶ್ ಉಪಾಧ್ಯಾಯ ತಿಳಿಸಿದ್ದಾರೆ.

ಕೆರೆಯಂತಾದ ಪರ್ಕಳ ರಾಷ್ಟ್ರೀಯ ಹೆದ್ದಾರಿ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿಯ ಪರ್ಕಳದ ದೇವಿ ನಗರ ರಾಷ್ಟ್ರೀಯ ಹೆದ್ದಾರಿ 169 ಎ ಕಾಂಕ್ರೀಟ್ ರಸ್ತೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ.

ಹೊಸ ರಸ್ತೆಯಲ್ಲಿಯೇ ಈ ರೀತಿ ನೀರು ತುಂಬಿರುವುದು ಈ ರಸ್ತೆಯ ವಿನ್ಯಾಸ ಅವೈಜ್ಞಾನಿಕ ಎಂಬುದಾಗಿ ಸ್ಪಷ್ಟವಾಗುತ್ತದೆ. ನೀರು ಹರಿದು ಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ನೀರು ತುಂಬಿರುವುದು ಮತ್ತು ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಪ್ರವಾಹದಂತಹ ಪರಿಸ್ಥಿತಿ ಇನ್ನೂ ಉದ್ಙವಿಸದ ಕಾರಣ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ತಹಶೀಲ್ದಾರ್‌ಗಳು ಕೇಂದ್ರ ಕಚೇರಿಯಲ್ಲಿದ್ದುಕೊಂಡು ಅಗತ್ಯವಿದ್ದಲ್ಲಿ ಜನರನ್ನು ತಗ್ಗು ಪ್ರದೇಶಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಈ ಸಂಬಂಧ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಗಳನ್ನು ತೆಗೆದುಕೊಳ್ಳಲಾಗಿದೆ. ಹವಾಮಾನ ಇಲಾಖೆಯು ಸಂಜೆಯ ವೇಳೆ ಮಳೆ ಕಡಿಮೆ ಆಗುವ ಮುನ್ಸೂಚನೆಯನ್ನು ನೀಡಿದೆ’

-ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News