ಉಡುಪಿ ಜಿಲ್ಲೆಯಲ್ಲಿ ಸಿಡಿಲಿಗೆ ಇನ್ನೊಂದು ಬಲಿ; ಗಾಳಿ-ಮಳೆಗೆ ಅಪಾರ ಹಾನಿ

Update: 2024-05-24 14:03 GMT

ಉಡುಪಿ: ಮುಂಗಾರು ಪೂರ್ವ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಇನ್ನೊಂದು ಎಳೆಯ ಜೀವ ಬಲಿಯಾಗಿದೆ. ಶಿರ್ವದ ಮಾಣಿಬೆಟ್ಟಿನಲ್ಲಿ ಗುರುವಾರ ಸಂಜೆ ಸಿಡಿಲಿಗೆ ಕಾಲೇಜು ವಿದ್ಯಾರ್ಥಿಯೊಬ್ಬರು ಮೃತಪಟ್ಟರೆ, ಕುಂದಾಪುರ ಮತ್ತು ಬೈಂದೂರು ತಾಲೂಕಿನಾದ್ಯಂತ ಗಾಳಿ-ಮಳೆ-ಸಿಡಿಲಿಗೆ 20ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.

ಕಾಪು ತಾಲೂಕು ಶಿರ್ವ ಗ್ರಾಪಂ ವ್ಯಾಪ್ತಿಯ ಮಾಣಿಬೆಟ್ಟು ಎಂಬಲ್ಲಿ ರಕ್ಷಿತ್ ಪೂಜಾರಿ (19) ಸಿಡಿಲಾಘಾತಕ್ಕೆ ಬಲಿಯಾದ ಯುವಕ. ಸಂಜೆ 5:45ರ ಸುಮಾರಿಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಸಿಡಿಲು ಬಡಿದು, ಆಘಾತಕ್ಕೆ ಕುಸಿದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ರಾತ್ರಿ 11:35ಕ್ಕೆ ಮೃತಪಟ್ಟಿದ್ದಾರೆ ಎಂದು ಕಾಪು ತಾಲೂಕು ತಹಶೀಲ್ದಾರರು ತಿಳಿಸಿದ್ದಾರೆ.

ಮಾಣಿಬೆಟ್ಟು ತೋಟದಮನೆ ನಿವಾಸಿ ರಮೇಶ್ ಪೂಜಾರಿ ಎಂಬವರ ಪುತ್ರ ರಕ್ಷಿತ್ ಪೂಜಾರಿ ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿಯಾಗಿದ್ದರು. ಗುರುವಾರ ಸಂಜೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಅವರಿಗೆ ಸಿಡಿಲು ಬಡಿದಿದೆ. ನೆಲದಲ್ಲಿ ಬಿದ್ದಿದ್ದ ಅವರನ್ನು ಮನೆ ಮಂದಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಅವರು ತಿಳಿಸಿದರು.

ಗುರುವಾರ ಸಂಜೆ ಜಿಲ್ಲೆಯಾದ್ಯಂತ ಸಿಡಿಲು-ಗುಡುಗು ಸಹಿತ ಬೀಸಿದ ಭಾರೀ ಗಾಳಿ-ಮಳೆಗೆ 20ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿರುವ ಬಗ್ಗೆ ಇಲ್ಲಿಗೆ ಮಾಹಿತಿಗಳು ಬಂದಿವೆ.

ಬೈಂದೂರು ತಾಲೂಕಿನ ಕಳವಾಡಿ ಶ್ರೀಮಾರಕಾಂಬಾ ದೇವಾಲಯದ ಎದುರು ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಸಭಾಂಗಣದ ಮೇಲ್ಚಾವಣಿ ಭಾರೀ ಗಾಳಿಗೆ ಸಂಪೂರ್ಣವಾಗಿ ಕುಸಿದು ಧರಾಶಾಹಿಯಾಗಿದೆ. ಬೀಸಿದ ಭಾರೀ ಗಾಳಿಗೆ ತಾಲೂಕಿನ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು, ತೆಂಗಿನ ಮರಗಳು ಸೇರಿ ತೋಟಗಾರಿಕಾ ಬೆಳೆಗಳು ಸಹ ನೆಲಕಚ್ಚಿರುವ ಬಗ್ಗೆ ವರದಿಯಾಗಿದೆ.

ಕುಂದಾಪುರ ತಾಲೂಕಿನಲ್ಲಿ 15ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಅಂಪಾರು ಗ್ರಾಮದ ಶ್ಯಾಮಲಾ ಶೆಟ್ಟಿ ಅವರ ಮನೆ ಗಾಳಿ-ಮಳೆಯಿಂದ ಹಾನಿಗೊಳಗಾಗಿದ್ದು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಅಲ್ಲೇ ಪಕ್ಕದ ದಿವಾಕರ ಶೆಟ್ಟಿ ಅವರ ಮನೆಗೆ 1.50 ಲಕ್ಷ ರೂ.ನಷ್ಟವಾದ ಬಗ್ಗೆ ಅಂದಾಜಿಸಲಾಗಿದೆ.

ಚಿತ್ತೂರು ಗ್ರಾಮದ ಲಕ್ಷ್ಮೀ ಪೂಜಾರಿ, ಹೊಸೂರು ಗ್ರಾಮದ ಚಿಕ್ಕ ಹಾಗೂ ಮೊಳಹಳ್ಳಿ ಗ್ರಾಮದ ವೆಂಕಯ್ಯ ಪೂಜಾರಿ ಅವರ ವಾಸ್ತವ್ಯದ ಮನೆಗಳಿಗೆ ತಲಾ 50,000 ರೂ. ನಷ್ಟವಾದರೆ, ಕಾವ್ರಾಡಿ ಗ್ರಾಮದ ರಾಜೀವಿ ಅವರ ಮನೆಗೆ 25,000 ಮತ್ತು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಪಿಣಿಯ ಕುಲಾಲರ ಮನೆ ಹಾಗೂ ಕೊಟ್ಟಿಗೆ ಮೇಲೆ ಮರಬಿದ್ದು 20000ಕ್ಕೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ.

ಇನ್ನುಳಿದಂತೆ ಉಪ್ಪಿನಕುದ್ರು ಗ್ರಾಮದ ನಾಗಪ್ಪಯ್ಯ, ಶಂಕರನಾರಾಯಣ ಗ್ರಾಮದ ರತ್ನ ನಾಯ್ಕ, ಮೊಳಹಳ್ಳಿ ಗ್ರಾಮದ ಗಿರಿಜಾ ಪೂಜಾರಿ, ಮುತ್ತು ಪೂಜಾರ್ತಿ, ಕೆಂಚ ಮೊಗೇರ್ತಿ, ರತ್ನಾಕರ ಶೆಟ್ಟಿ ಇವರ ಮನೆಗಳಿಗೂ ಗಾಳಿ-ಮಳೆಯಿಂದ ಹಾನಿಯಾದ ವರದಿಗಳು ಬಂದಿವೆ.

ಬೈಂದೂರು ತಾಲೂಕಿನ ನಾವುಂದ ಗ್ರಾಮದ ಭಾಸ್ಕರ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ಹಾನಿಯುಂಟಾಗಿದೆ. ತೆಗ್ಗರ್ಸೆ ಗ್ರಾಮದ ರಾಮಕೃಷ್ಣ ಅವರ ಮನೆ ಮೇಲೆ ಮರಬಿದ್ದು 75,000ರೂ., ಬೈಂದೂರು ಗ್ರಾಮದ ವೆಂಕಟರಮಣ ಹಾಗೂ ಮಹಾಬಲ ಶೇರಿಗಾರ್ ಎಂಬವರ ಮನೆ ಮೇಲೆ ಮರ ಬಿದ್ದು ತಲಾ 50,000ರೂ. ನಷ್ಟ ಸಂಭವಿಸಿದೆ.

ಬೈಂದೂರು ಗ್ರಾಮದ ಬಿ.ಕೆ.ಅಚ್ಚುತಯ್ಯ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದು ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಬ್ರಹ್ಮಾವರ ತಾಲೂಕಿನ 33 ಶೀರೂರು ಗ್ರಾಮದ ಸೂರ್ಯ ಕುಲಾಲ ಎಂಬವರ ವಾಸದ ಮನೆ ಗಾಳಿ ಮಳೆಗೆ ಭಾಗಶ: ಹಾನಿಗೊಂಡರೆ ಕಾವಡಿ ಗ್ರಾಮದ ಪ್ರಸಾದ್ ಅವರ ಮನೆಯೂ ಹಾನಿಗೊಂಡಿದ್ದು ತಲಾ 50,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ 13.9ಮಿ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 13.9 ಮಿ.ಮೀ. ಸರಾಸರಿ ಮಳೆ ಸುರಿದಿದೆ. ಕಾಪುವಿನಲ್ಲಿ ಅತ್ಯಧಿಕ 25.1ಮಿ.ಮೀ. ಮಳೆಯಾಗಿದೆ. ಉಳಿದಂತೆ ಬೈಂದೂರಿನಲ್ಲಿ 22.7ಮಿ.ಮೀ., ಕಾರ್ಕಳದಲ್ಲಿ 19.5, ಬ್ರಹ್ಮಾವರ 11.7, ಉಡುಪಿ 11.2, ಹೆಬ್ರಿ 7.7 ಹಾಗೂ ಕುಂದಾಪುರದಲ್ಲಿ 5.6ಮಿ.ಮೀ. ಮಳೆಯಾದ ವರದಿ ಬಂದಿದೆ.

ಸಿಡಿಲಿಗೆ ಮೂರನೇ ಬಲಿ

ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಪ್ರಾರಂಭಗೊಂಡ ನಂತರ ಸಿಡಿಲಿನಾಘಾತಕ್ಕೆ ಬಲಿಯಾದ ಮೂರನೇಯವರು ರಕ್ಷಿತ್ ಪೂಜಾರಿ. ಈ ಮೊದಲು ಕಾರ್ಕಳ ತಾಲೂಕಿನ ಕಾಂತಾವರ ಹಾಗೂ ಸಿದ್ಧಾಪುರದಲ್ಲಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದರು.






 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News