ಅಧಿಕ ಟೋಲ್ ವಸೂಲಿ: ಕೆನರಾ ಬಸ್ ಮಾಲಕರಿಂದ ಮುಷ್ಕರಕ್ಕೆ ನಿರ್ಧಾರ
ಉಡುಪಿ, ಆ.18: ಟೋಲ್ ಗೇಟ್ ಗಳಲ್ಲಿ ಬಸ್ಸುಗಳಿಗೆ ಹೆಚ್ಚು ಶುಲ್ಕ ವಸೂಲು ಮಾಡುತ್ತಿರುವುದರ ವಿರುದ್ಧ ಮುಷ್ಕರ ನಡೆಸಲು ಕೆನರಾ ಬಸ್ ಮಾಲಕರ ಸಂಘ ನಿರ್ಧರಿಸಿದೆ.
ಉಡುಪಿಯ ಪುರಭವನದಲ್ಲಿ ಶನಿವಾರ ನಡೆದ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಟೋಲ್ ದರವಷ್ಟೇ ಅಲ್ಲದೇ ಬಸ್ಗಳಿಗೆ ಘನ ವಾಹನಗಳಿಗೆ ಇರುವ ಟೋಲ್ ದರವನ್ನು ಕೂಡ ಖಾತೆಯಿಂದ ಕಡಿತ ಮಾಡಲಾಗುತ್ತಿದೆ. ಈ ಹಿಂದೆಯೂ ಕೆಲವು ಬಾರಿ ಈ ರೀತಿ ಹಣ ಖಾತೆಯಿಂದ ತೆಗೆಯಲಾಗಿತ್ತು ಎಂದು ಸಭೆಯಲ್ಲಿ ಆರೋಪಗಳು ಕೇಳಿಬಂದಿವೆ.ಈ ಸಂಬಂಧ ಆ.19ರಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿಗೆ ಮನವಿ ಸಲ್ಲಿಸಲಾಗುವುದು.
ಒಂದೆರೆಡು ದಿನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಆ.23ರಂದು ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಗೇಟ್ ಗಳಲ್ಲಿ ಹಾದುಹೋಗುವ ಎಲ್ಲ ಬಸ್ ಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಮುಷ್ಕರ ನಡೆಸಲಾಗುವುದು ಎಂದು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.