ಸೆ.24ಕ್ಕೆ ಸಿಎಂರಿಂದ ‘ಬಿಲ್ಲವ ಹಾಸ್ಟೆಲ್’ ಲೋಕಾರ್ಪಣೆ

Update: 2023-09-16 13:41 GMT

ಉಡುಪಿ, ಸೆ.16: ಅಖಿಲ ಭಾರತ ಬಿಲ್ಲವರ ಯೂನಿಯನ್‌ನಿಂದ ಮಂಗಳೂರಿನ ಕುಂಜತ್ತಬೈಲಿನಲ್ಲಿ ನಿರ್ಮಿಸಲಾದ ದಾಮೋದರ್ ಆರ್. ಸುವರ್ಣ ಸ್ಮಾರಕ ‘ಬಿಲ್ಲವ ಹಾಸ್ಟೆಲ್’ ಸೆ.24ರಂದು ರವಿವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಯೂನಿಯನ್‌ನ ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆ ಯಿಂದ ಬಲಯುತರಾಗಿ’ ಎಂಬ ಧೇಯ್ಯೋದ್ದೇಶದೊಂದಿಗೆ ಸಮಾಜದ ಯುವಜನತೆಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯೂನಿಯನ್ ಇದನ್ನು ನಿರ್ಮಿಸಿದೆ ಎಂದರು.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೆ.24ರಂದು ಬೆಳ್ಳಗ್ಗೆ 10:00 ಗಂಟೆಗೆ ಲೋಕಾರ್ಪಣಾ ಸಮಾರಂಭ ನಡೆಯಲಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪದವಿಪೂರ್ವ ನಂತರದ ಬಾಲಕಿಯರಿಗಾಗಿ ನಿರ್ಮಿಸ ಲಾದ ಬಿಲ್ಲವ ಹಾಸ್ಟೆಲ್‌ನ್ನು ಉದ್ಘಾಟಿಸಲಿದ್ದಾರೆ. ಮಾಜಿ ಕೇಂದ್ರ ವಿತ್ತಸಚಿವ ಬಿ.ಜರ್ನಾದನ ಪೂಜಾರಿ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ನವೀನ್‌ಚಂದ್ರ ಸುವರ್ಣ ತಿಳಿಸಿದರು.

ನವೀನ್‌ ಚಂದ್ರ ಡಿ.ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭ ದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ.

ಮುಖ್ಯಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ನಳೀನ್‌ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಓಟ ಶ್ರೀನಿವಾಸ ಪೂಜಾರಿ, ಕರಾವಳಿಯ ಶಾಸಕರಾದ ವಿ.ಸುನಿಲ್ ಕುಮಾರ್, ಉಮಾನಾಥ್ ಕೋಟ್ಯಾನ್, ಹರೀಶ್ ಕುಮಾರ್, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮಂಗಳೂರು ಮೇಯರ್ ಜಯಾನಂದ ಅಂಚನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಕೆ.ವಸಂತ ಬಂಗೇರ, ಗೋಪಾಲ ಪೂಜಾರಿ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ, ಯೂನಿಯನ್‌ನ ಖಜಾಂಚಿ ಕಾಶೀನಾಥ್ ಉಪಸ್ಥಿತರಿದ್ದರು.

5.25 ಕೋಟಿ ವೆಚ್ಚದಲ್ಲಿ ಹಾಸ್ಟೆಲ್

ಮಂಗಳೂರು ನಗರದಿಂದ ಆರು ಕಿ.ಮೀ. ದೂರದ ಕುಂಜತ್ತಬೈಲ್‌ನ ಸುಮಾರು ಒಂದು ಎಕರೆ ಜಾಗದಲ್ಲಿ ಒಟ್ಟು 5.25 ಕೋಟಿ ರೂ.ವೆಚ್ಟದಲ್ಲಿ ಈ ಹಾಸ್ಟೆಲ್‌ನ್ನು ನಿರ್ಮಿಸಲಾಗಿದೆ.ಉನ್ನತ ವೃತ್ತಿಪರ ಶಿಕ್ಷಣ ಬಯಸುವ ಬಿಲ್ಲವ ಹಾಗೂ ಹಿಂದುಳಿದ ಸಮುದಾಯದ ಮಹಿಳೆಯರಿಗಾಗಿ ಈ ಹಾಸ್ಟೆಲ್ ನಿರ್ಮಿಸಲಾಗಿದೆ ಎಂದು ನವೀನ್‌ಚಂದ್ರ ಸುವರ್ಣ ತಿಳಿಸಿದರು.

ಐದು ಮಹಡಿಗಳ ಈ ಕಟ್ಟಡದಲ್ಲಿ 100 ಮಂದಿ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವಿರುತ್ತದೆ. ವೃತ್ತಿಪರ ಶಿಕ್ಷಣ ಪಡೆಯುವ ಬಡ ಬಿಲ್ಲವರ ವಿದ್ಯಾರ್ಥಿನಿಯರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. ಉಳಿದ ಸೀಟುಗಳನ್ನು ಬಡ ಹಾಗೂ ಹಿಂದುಳಿದ ಇತರ ವರ್ಗಗಳ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News