ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಬೋನ್ ಬ್ಯಾಂಕ್ ಉದ್ಘಾಟನೆ

Update: 2023-09-17 12:39 GMT

ಉಡುಪಿ, ಸೆ.17: ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಬೋನ್ ಬ್ಯಾಂಕ್ (ಮೂಳೆ ನಿಧಿ) ಅನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಮುಖ್ಯಸ್ಥ ಡಾ.ರಂಜನ್ ಆರ್.ಪೈ ರವಿವಾರ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಮಣಿಪಾಲ ಫೌಂಡೇಶನ್‌ನ ಸಿಇಒ ಹರಿನಾರಾಯಣ ಶರ್ಮಾ, ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಮತ್ತು ಸಹ ಉಪ ಕುಲಪತಿ ಡಾ.ಶರತ್ ಕುಮಾರ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿದರು

ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಬೋನ್ ಬ್ಯಾಂಕ್ ಸಂಚಾಲಕ ಡಾ.ಮೋನಪ್ಪ ನಾಯ್ಕ್ ಆರೂರು ಮಾತನಾಡಿ, ಮೂಳೆಯ ಕ್ಯಾನ್ಸರ್ ಗೆಡ್ಡೆಯ ಛೇದನದಲ್ಲಿ ಉಂಟಾಗುವ ದೊಡ್ಡ ಪ್ರಮಾಣದ ಮೂಳೆ ನಷ್ಟತೆಯನ್ನು ನಿರ್ವಹಿಸುವಲ್ಲಿ, ಮುರಿದ ಮೂಳೆಗಳಲ್ಲಿ ಮೂಳೆ ನಷ್ಟ ಉಂಟಾಗಿ ಕೂಡದಿರುವ ಸಂದರ್ಭದಲ್ಲಿ, ಕೀಲು ಪುನರ್ನಿರ್ಮಾಣ ಶಸ್ತ್ರ ಚಿಕಿತ್ಸೆಯಲ್ಲಿ ಕಂಡುಬರುವ ಮೂಳೆ ನಷ್ಟತೆಗೆ ಮೂಳೆ ಕಸಿಗಳ ಅಗತ್ಯವಿರುತ್ತದೆ. ಈ ಪರಿಸ್ಥಿತಿ ಗಳಲ್ಲಿ ಅಲೋಗ್ರಾಫ್ಟ್‌ ಗಳು ತುಂಬಾ ಉಪಯುಕ್ತವಾಗುತ್ತದೆ ಎಂದರು.

ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸಾ ಪ್ರಕ್ರಿಯೆಗಳಲ್ಲಿ ಹೊರತೆಗೆಯುವ, ಹಾನಿಗೊಳಗಾದ ಎಲುಬಿನ ತುಂಡುಗಳು ಮತ್ತು ಆಯ್ದ ಅಂಗಛೇದನ ಶಸ್ತ್ರ ಚಿಕಿತ್ಸೆಯಲ್ಲಿ ತೆಗೆದ ಅಂಗದ ಭಾಗದಲ್ಲಿರುವ ಮೂಳೆಗಳು ಹಾಗೂ ಆರೋಗ್ಯಕರ ಸ್ವಯಂ ಪ್ರೇರಿತ ದಾನಿಗಳಿಂದ ಪಡೆಯುವ ಮೂಳೆ ಬೋನ್ ಬ್ಯಾಂಕಿನ ಮೂಲವಾಗಿರುತ್ತದೆ ಎಂದು ಅವರು ತಿಳಿಸಿದರು.

ಮಾಹೆ ಕುಲಸಚಿವರಾದ ಶ್ರುತಿ ಆರ್.ಪೈ, ಡಾ.ಗಿರಿಧರ್ ಕಿಣಿ, ಸಿಓಓ ಸಿ.ಜಿ.ಮುತ್ತಣ್ಣ, ಆಸ್ಪತ್ರೆಯ ಸಿಓಓ ಡಾ.ಆನಂದ ವೇಣುಗೋಪಾಲ್, ಮೂಳೆ ಮತ್ತು ಕೀಲು ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಶ್ಯಾಮಸುಂದರ್ ಭಟ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News