ಕಾಪು: ಹಿರಿಯ ರಂಗ ಕಲಾವಿದ ಕಾಪು ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ

Update: 2023-12-13 18:29 GMT

ಕಾಪು: ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಂದಾಳು, ಸಮಾಜ ಸೇವಕ, ಹಿರಿಯ ರಂಗ ಕಲಾವಿದ ಕೆ.ಲೀಲಾಧರ ಶೆಟ್ಟಿ(68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ(59) ಕೌಟುಂಬಿಕ ಕಾರಣಕ್ಕಾಗಿ ಮಂಗಳವಾರ ಮಧ್ಯ ರಾತ್ರಿ ವೇಳೆ ಮಜೂರು ಗ್ರಾಮದ ಕರಂದಾಡಿ ಎಂಬಲ್ಲಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಲೀಲಾಧರ ಶೆಟ್ಟಿ ದಂಪತಿ ಮಕ್ಕಳಿಲ್ಲದ ಕಾರಣಕ್ಕಾಗಿ ಸುಮಾರು 16 ವರ್ಷದ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡಿದ್ದರು. ಆಕೆ ಡಿ.12ರಂದು ರಾತ್ರಿ ಮನೆ ಬಿಟ್ಟು ಹೋಗಿದ್ದು, ಇದೇ ವಿಚಾರದಲ್ಲಿ ಮರ್ಯಾದೆಗೆ ಅಂಜಿ ಮನನೊಂದ ದಂಪತಿ, ಮರಣ ಪತ್ರ ಬರೆದಿಟ್ಟು ರಾತ್ರಿ 11:20 ಗಂಟೆಯಿಂದ ಮಧ್ಯರಾತ್ರಿ 12.30ರ ಮಧ್ಯಾವಧಿಯಲ್ಲಿ ಮನೆಯ ಮಲಗುವ ಕೋಣೆಯಲ್ಲಿ  ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳವಾರ ಹಗಲಿಡೀ ವಿವಿಧೆಡೆ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಲೀಲಾಧರ ಶೆಟ್ಟಿ, ಸಂಜೆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಬಳಿಕ ಕಾಪು ಶ್ರೀಜನಾರ್ದನ ದೇವಳದ ದೀಪೋತ್ಸವದಲ್ಲಿ ಭಾಗವಹಿಸಿ ಮನೆಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 ದಶಕಗಳಿಂದ ಕಲಾಸೇವೆ

ಕರಂದಾಡಿ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡುತ್ತಿದ್ದಾಗಲೇ ನಾಟಕ ರಂಗ ಹಾಗೂ ಯಕ್ಷಗಾನ ಕ್ಷೇತ್ರದ ಬಗ್ಗೆ ಆಕರ್ಷಿತರಾಗಿದ್ದ ಲೀಲಾಧರ ಶೆಟ್ಟಿ, ಶ್ರೀಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯನ್ನು ಕಟ್ಟಿ ಭಜನಾ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿದ್ದರು.

ಮಕ್ಕಳ ಯಕ್ಷಗಾನ ತಂಡವನ್ನು ಕಟ್ಟಿ ಕಾಪು ಪರಿಸರದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿರುವುದಲ್ಲದೆ, ಕಾಪು ಪರಿಸರದಲ್ಲಿ ಯಕ್ಷಗಾನ, ನಾಟಕ ತಂಡಗಳ ಪ್ರದರ್ಶನ ಆಯೋಜನೆಯಲ್ಲಿಯೂ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ತಾನು ಕಲಿತ ಶಾಲೆಯ ಉಳಿವಿಗಾಗಿ ಅವಿರತ ಶ್ರಮಿಸುತ್ತಿದ್ದ ಅವರು, ಅನುದಾನಿತ ಶಾಲೆಯಲ್ಲಿ ಸರಕಾರಿ ವೇತನ ಪಡೆಯುವ ಓರ್ವ ಶಿಕ್ಷಕನ ಹೊರತು 6 ಜನ ಅತಿಥಿ ಶಿಕ್ಷಕರಿಗೆ ಗೌರವಧನ ನೀಡಿ ಸಂಸ್ಥೆ ಏಳಿಗೆಗಾಗಿ ಶ್ರಮಿಸುತ್ತಿದ್ದರು.

ಸಾಮಾಜಿಕ ಕಾರ್ಯಕರ್ತರಾಗಿದ್ದ ಇವರು ಸಮಾಜದಲ್ಲಿ ನೊಂದವರ ಪಾಲಿಗೆ ಆಶಾಕಿರಣವಾಗಿದ್ದರು. ಸಾವಿರಾರು ಮಂದಿಗೆ ಶಿಕ್ಷಣ, ಉದ್ಯೋಗ, ಸಾಂಸಾರಿಕ ಬಾಂಧವ್ಯ ಜೋಡಣೆಗೆ ನೆರವಾಗಿದ್ದ ಅವರು 2 ದಶಕಗಳಿಂದ ಕಾಪು ರಂಗ ತರಂಗ ನಾಟಕ ತಂಡವನ್ನು ಕಟ್ಟಿ ಕಲೆಯನ್ನು ಪ್ರಸಾರಗೊಳಿಸಲು ಅಪರಿಮಿತವಾಗಿ ಶ್ರಮಿಸಿದ್ದರು.

ಕಲಾವಿದರ ಬದುಕಿಗೆ ಸದಾ ಮಿಡಿಯುತ್ತಿದ್ದ ಅವರು ಕರೋನೊತ್ತರ ಬಳಿಕ ಕಲಾವಿದರ ಸಂಘಟನೆಯನ್ನು ಮಾಡಿ ಅವರ ಸಹಾಯಕ್ಕೂ ಮುಂದಾಗಿದ್ದರು. ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ ಪುರಸ್ಕಾರ ಸಹಿತವಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಭಾಜನರಾಗಿದ್ದರು.

ಸಾಮಾಜಿಕ ಮುಂದಾಳು

ನಾಟಕ ರಂಗದ ಮೂಲಕ ಸಮಾಜದ ಕಣ್ಣು ತೆರೆಸುತ್ತಿದ್ದ ಲೀಲಾಧರ ಶೆಟ್ಟಿ, ಸಮಾಜದಲ್ಲಿನ ವರದಕ್ಷಿಣೆ ಪಿಡುಗನ್ನು ನಿವಾರಿಸುವಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡುತ್ತಿದ್ದರು. ಸರಳ ವಿವಾಹ, ಮದ್ಯರಹಿತ ಮೆಹೆಂದಿಗೆ ಉತ್ತೇಜನ ನೀಡಿದ ಮೇರು ವ್ಯಕ್ತಿ. ಬಡಬಗ್ಗರಿಗೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡುತ್ತಿದ್ದ ಇವರು, ಬೇಧ ಭಾವವಿಲ್ಲದೆ ಎಲ್ಲರೊಂದಿಗೆ ಬೆರೆತು ಅಜಾತಶತ್ರು ಆಗಿದ್ದರು.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಂದಾಳುವಾಗಿ ಗುರುತಿಸಿಕೊಂಡಿದ್ದ ಲೀಲಾಧರ ಶೆಟ್ಟಿ, ಕಾಪು, ಮಜೂರು, ಉಳಿಯಾರು, ಕರಂದಾಡಿ, ಜಲಂಚಾರು, ಮಲ್ಲಾರು ಪರಿಸರದ ವಿವಿಧ ದೇವಸ್ಥಾನ, ದೈವಸ್ಥಾನ, ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಮುಂಚೂಣಿಯ ಪಾತ್ರ ವಹಿಸಿ ಸರ್ವ ಧರ್ಮೀಯರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.

ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿ, ಕಲಾ ಸಂಘಟಕ, ಕಲಾ ಪೋಷಕರಾಗಿದ್ದ ಅವರು, ಪ್ರಸ್ತುತ ಕಾಪು ಶ್ರೀಮಹಾದೇವಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರಾಗಿ, ಕರಂದಾಡಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ, ಹೊಸಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗ್ರಾಮ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಚುನಾವಣೆಗೂ ಸ್ಪರ್ಧಿಸಿದ್ದರು

ಲೀಲಾಧರ ಶೆಟ್ಟಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿಯೂ ಚುನಾವಣೆಗೆ ಸ್ಪರ್ಧಿಸಿದ್ದರು. ಇವರು ಬಹಳಷ್ಟು ಮಂದಿ ರಾಜಕೀಯ ಮತ್ತು ಸಾಮಾಜಿಕ ನಾಯಕರುಗಳಿಗೆ ಮಾರ್ಗದರ್ಶಕರಾಗಿದ್ದರು.

ಮಜೂರು ನಾಗರಿಕ ಸಮಿತಿ ಮೂಲಕ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು ಗ್ರಾಪಂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕಾಪು ತಾಲೂಕು ರಚನೆ ಹೋರಾಟದ ನೇತೃತ್ವವನ್ನು ವಹಿಸಿಕೊಂಡು ತಾಲ್ಲೂಕಿನಾದ್ಯಂತ ಸಂಚರಿಸಿ ಹೋರಾಟಕ್ಕೆ ಕಿಚ್ಚು ತಂದು ಕೊಟ್ಟರು. ಹೆಜಮಾಡಿಯಿಂದ ಉದ್ಯಾವರದವರೆಗೆ ಪಾದಯಾತ್ರೆ ನಡೆಸಿ ಸರಕಾರದ ಮೇಲೆ ಒತ್ತಡ ತಂದರು. 2017ರಲ್ಲಿ ಕಾಪು ತಾಲ್ಲೂಕಾಗಿ ರಚನೆಯಾಯಿತು.

ಶೋಕಸಾಗರದ ಮಧ್ಯೆ ಅಂತ್ಯಸಂಸ್ಕಾರ

ಲೀಲಾಧರ ಶೆಟ್ಟಿ ದಂಪತಿಯ ಅಕಾಲಿಕ ಮರಣದಿಂದ ಕಾಪು ತಾಲೂಕಿನ ಜನತೆ ಶೋಕ ಸಾಗರದಲ್ಲಿ ಮುಳುಗಿದ್ದು, ಈ ಮಧ್ಯೆ ಅವರ ಮನೆ ಬಳಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಸಾವಿನ ಸುದ್ದಿ ತಿಳಿದು ಮಂಗಳವಾರ ಮಧ್ಯರಾತ್ರಿಯಿಂದಲೇ ನೂರಾರು ಮಂದಿ ಸಂಬಂಧಿಕರು, ಅಭಿಮಾನಿಗಳು, ಹಿತೈಷಿಗಳು ಮನೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದು, ಬುಧವಾರ ಸಂಜೆ ಕಾಪು ಪೊಲಿಪು ಜಾಮಿಯಾ ಮಸೀದಿ ಜಂಕ್ಷನ್‌ನಿಂದ ಕರಂದಾಡಿ ಶಾಲೆಯವರೆಗೆ ದಂಪತಿಯ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಯಲ್ಲಿ ತಂದು ಕರಂದಾಡಿ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು.

 

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಸೇರಿದಂತೆ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತುತಿ ಧಾರ್ಮಿಕ ಕ್ಷೇತ್ರದ ನೂರಾರು ಮಂದಿ ಯಾತ್ರೆಯುದ್ದಕೂ ಪಾಲ್ಗೊಂಡು ಗೌರವ ಸಲ್ಲಿಸಿದ್ದರು.

ಮೃತರ ಗೌರವಾರ್ಥ ಬೆಳಗ್ಗೆಯಿಂದ ಕಾಪು ಪೇಟೆ, ಕೊಂಬಗುಡ್ಡೆ, ಮಜೂರು ಪರಿಸರದಲ್ಲಿನ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಗೌರವ ಸೂಚಿಸಲಾಯಿತು. ಇವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲ, ಕಾಂಗ್ರೆಸ್ ಮುಖಂಡರಾದ ನವೀನ್‌ಚಂದ್ರ ಶೆಟ್ಟಿ, ಅಬ್ದುಲ್ ಅಝೀಝ್, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಡೆತ್‌ನೋಟಿನಲ್ಲಿ ಏನಿತ್ತು?

‘ಜೀವಕ್ಕಿಂತ ಮಾನ ಮುಖ್ಯ. ಸಮಾಜದಲ್ಲಿ ತಲೆಎತ್ತಿ ಬದುಕಲು ಕಷ್ಟವಾಗಿದೆ. ಹಾಗಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ. ನಾನು ನೂರಾರು ಮಂದಿಗೆ ಬುದ್ದಿ ಹೇಳಿ, ಈಗ ನಾನೇ ಈ ತಪ್ಪು ಕೆಲಸ ಮಾಡುತ್ತಿದ್ದೇನೆ. ನನ್ನ ಅಭಿಮಾನಿಗಳು ಕ್ಷಮೀಸಬೇಕು’ ಎಂದು ಲೀಲಾಧರ ಶೆಟ್ಟಿ ಕಾಪು ತನ್ನ ಡೆತ್‌ನೋಟಿನಲ್ಲಿ ಬರೆದಿಟ್ಟಿದ್ದಾರೆಂದು ತಿಳಿದುಬಂದಿದೆ.

ಸುಮಾರು ಎರಡೂವರೆ ಪುಟಗಳ ಡೆತ್‌ನೋಟಿನಲ್ಲಿ ಅವರು, ಸಮಾಜದಲ್ಲಿ ಎಲ್ಲರು ಜಾತಿ ಧರ್ಮ ಬೇಧ ಭಾವ ಮೆರೆತು ಒಂದಾಗಿ ಬದುಕಬೇಕು ಎಂದು ಹೇಳಿದ್ದಾರೆ. ದೇವಸ್ಥಾನಗಳಲ್ಲಿನ ಜೀಣೋದ್ಧಾರ ಕಾರ್ಯ ಬಾಕಿ ಇರುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಸಾಮಾಜಿಕ ಕಳಕಳಿಯ ಬಗ್ಗೆಯೂ ಮರಣಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಪಹರಣ ಪ್ರಕರಣ ದಾಖಲು

ಕಾಪು ಲೀಲಾಧರ ಶೆಟ್ಟಿ ಅವರ ಅಪ್ರಾಪ್ತ ವಯಸ್ಸಿನ ದತ್ತು ಪುತ್ರಿ ನಾಪತ್ತೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಅಪರಹಣ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಕೆ ಡಿ.12ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News