ಕಾರ್ಕಳ: ವ್ಯಕ್ತಿಯ ಮೃತದೇಹ ಮನೆಯಲ್ಲಿ ಪತ್ತೆ
ಕಾರ್ಕಳ: ವ್ಯಕ್ತಿಯೊಬ್ಬರ ಮೃತದೇಹ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾರ್ಕಳ ಪುರಸಭಾ ವ್ಯಾಪ್ತಿಯ ಬಂಗ್ಲೆಗುಡ್ಡೆ ಪರನೀರು ಎಂಬಲ್ಲಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ, ಮೂಲತ ಚಿಕ್ಕಮಗಳೂರು ಜಿಲ್ಲೆಯ ಬೇಲೂರು ತಾಲೂಕಿನ ಜಂಡಿಹಳ್ಳಿಯ ಶರೀಫ್ ಎಂದು ಗುರುತಿಸಲಾಗಿದೆ. ತನ್ನ ಮನೆಯಲ್ಲಿ ಮಲಗಿದ ಸ್ಧಿತಿಯಲ್ಲೇ ಮರಣಹೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೊದಲಿಗೆ ತನ್ನದೇ ಕುಟುಂಬದ ಯುವತಿಯೊಬ್ಬಳನ್ನು ಮದುವೆಯಾಗಿದ್ದ ಈತನಿಗೆ ಮೂರು ಮಕ್ಕಳಿದ್ದು, ಕೌಟುಂಬಿಕ ಕಲಹದಿಂದ ಬೇರ್ಪಟ್ಟ ಬಳಿಕ ಕಳೆದ 9 ವರ್ಷಗಳ ಹಿಂದೆ ಕಾರ್ಕಳ ಬಂಗ್ಲೆಗುಡ್ಡೆಯ ಯುವತಿಯನ್ನು 2ನೇ ಮದುವೆಯಾಗಿದ್ದ. ಹೀಗಿದ್ದೂ ಆಗಾಗ ಕಲಹಗಳು ನಡೆಯುತ್ತಿದ್ದು ಸುಮಾರು ಒಂದು ವರ್ಷದಿಂದ ಪತಿ ಪತ್ನಿಯರಿಬ್ಬರೂ ಬೇರೆ ಬೇರೆಯಾಗಿ ವಾಸವಿದ್ದರು ಎನ್ನಲಾಗಿದೆ.
ಕೂಲಿ ಕಾರ್ಮಿಕನಾಗಿದ್ದ ಈತ ಕಳೆದ ಶುಕ್ರವಾರದಿಂದ ಕೆಲಸಕ್ಕೆ ಬಾರದಿದ್ದಾಗ ಕೆಲಸಕ್ಕೆ ಹುಡುಕಿಕೊಂಡು ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.