ಅ.14ರಂದು ಗಾಂಧಿ ಸೆಂಟರ್‌ನಲ್ಲಿ ಕೇರಳ ಕಲಾ ಪ್ರಾತ್ಯಕ್ಷಿಕೆ
ಉಡುಪಿ, ಅ.13: ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ, ಉಡುಪಿಯ ಭಾವನಾ ಫೌಂಡೇಶನ್‌ನ ಸಹಯೋಗದಲ್ಲಿ ಶನಿವಾರ ಸಂಜೆ 6:45ಕ್ಕೆ ಸಂಸ್ಥೆಯ ಸರ್ವೋದಯ ಸಭಾಂಗಣದಲ್ಲಿ ಕೇರಳದ ಕಲಾವಿದ ವೇಣುಗೋಪಾಲ್ ಟಿ.ಕೆ. ಇವರಿಂದ ‘ಕಲಾಮೆಝುತ್ತು’ ಕುರಿತು ಪ್ರಾತ್ಯಕ್ಷಿಕೆ ನಡೆಯಲಿದೆ.
ಕೇರಳದಲ್ಲಿ ಕೈಬೆರಳುಗಳ ಸಹಾಯದಿಂದಲೇ ನೈಸರ್ಗಿಕ ಪುಡಿಗಳಿಂದ ನೆಲದ ಮೇಲೆ ದೇವದೇವತೆಗಳ ಆಕೃತಿಗಳನ್ನು ಬಿಡಿಸುವ ಪದ್ಧತಿಯೇ ಕಲಮೆಳ್ತ್. ಕಲಮೆಳ್ತ್ ಗೋಡೆಯ ಚಿತ್ರಕಲೆಯ ಮೊದಲ ರೂಪ ಎಂದು ಹೇಳಲಾಗುತ್ತದೆ. ಕಲಮೆಳ್ತ್ ಪಟ್ಟ್, ಮುದಿಯೆಟ್, ಭದ್ರಕಾಳಿಯಾಟ್, ಅಯ್ಯಪ್ಪನ್ ಥೇಯಟ್, ಕೋಲಂ ತುಳ್ಳಲ್ ಮತ್ತು ಸರ್ಪಂತುಳ್ಳಲ್ ಮುಂತಾದ ಎಲ್ಲಾ ಧಾರ್ಮಿಕ ಕಲೆಗಳಲ್ಲಿ ಇದು ಅನಿವಾರ್ಯವಾಗಿದೆ.
ಕಾಳಿ, ದುರ್ಗೆ, ಅಯ್ಯಪ್ಪನ್, ಯಕ್ಷಿ, ಗಂಧರ್ವ, ನಾಗ ಮುಂತಾದ ದೇವರನ್ನು ಈ ಕಲಾ ಪ್ರಕಾರದಲ್ಲಿ ಪ್ರಮುಖವಾಗಿ ಚಿತ್ರಿಸ ಲಾಗುತ್ತದೆ. ಪಂಚವರ್ಣಂ ಎಂಬ - ಬಿಳಿ, ಕಪ್ಪು, ಹಸಿರು, ಹಳದಿ ಮತ್ತು ಕೆಂಪು- ಐದು ವಿಧದ ನೈಸರ್ಗಿಕ ಪುಡಿಗಳನ್ನು ಇಲ್ಲಿ ಬಳಸಲಾಗುತ್ತದೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.