ವಿದ್ಯಾರ್ಥಿ ಜೀವನದಲ್ಲಿ ಪಡೆದ ಜ್ಞಾನ ವ್ಯರ್ಥವಾಗಲ್ಲ: ಡಾ.ರಘುವಂಶಿ
ಮಣಿಪಾಲ : ವಿದ್ಯಾರ್ಥಿಗಳು ರಾಷ್ಟ್ರದ ಬೆಳವಣಿಗೆಗೆ ಬಹಳ ದೊಡ್ಡ ಕೊಡುಗೆ ನೀಡಬೇಕು ಮತ್ತು ಸ್ವಾವಲಂಬನೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಭಾರತ ಸರಕಾರದ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಇದರ ಡ್ರಗ್ಸ್ ಕಂಟ್ರೋಲರ್ ಡಾ.ರಾಜೀವ್ ಸಿಂಗ್ ರಘುವಂಶಿ ಹೇಳಿದ್ದಾರೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ)ನ ೩೧ನೇ ಘಟಿಕೋತ್ಸವ ದಿನದ ಎರಡನೇ ದಿನವಾದ ರವಿವಾರ ಪದವಿ ಸಮಾರಂಭದ ದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.
ವಿಜ್ಞಾನದಲ್ಲಿ ನಮ್ಮ ದೃಢವಾದ ಅಡಿಪಾಯ ಮತ್ತು ಅದರ ತತ್ವಗಳಲ್ಲಿ ಅಚಲವಾದ ನಂಬಿಕೆಯಿಂದ ಭಾರತವು ಪ್ರಕ್ಷುಬ್ಧತೆ ಯಿಂದ ಹೊರಬಂದು ಯಶಸ್ಸು ಗಳಿಸಲು ಸಾಧ್ಯವಾಗಿದೆ. ವೈಜ್ಞಾನಿಕ ಅಡಿಪಾಯದ ನಿರಂತರ ಬೆಳವಣಿಗೆ ಮತ್ತು ವಿಕಸನಕ್ಕೆ ಕೊಡುಗೆ ನೀಡುವ ಮೂಲಕ ಈ ಪರಂಪರೆಯನ್ನು ಮುಂದುವರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಶಿಕ್ಷಣದಿಂದ ಸಂಪಾದಿಸಿದ ಜ್ಞಾನವನ್ನು ನಿಮ್ಮ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಜ್ಞಾನವನ್ನು ಸಂಪಾದಿ ಸುವುದನ್ನು ಎಂದಿಗೂ ನಿಲ್ಲಿಸ ಬಾರದು. ಜ್ಞಾನ ಸಂಪಾದನೆ ನಿರಂತರ ಪ್ರಕ್ರಿಯೆಯಾಗಿದೆ. ಜೀವನವು ಒಂದು ಪ್ರಯಾಣ ವಾಗಿದೆ ಮತ್ತು ಪ್ರತಿ ಹಂತದಲ್ಲಿಯೂ ಹೊಸದನ್ನು ಕಲಿಯಲು ಅವಕಾಶವಿದೆ. ಜ್ಞಾನವು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಅವರು ತಿಳಿಸಿದರು.
ಮಣಿಪಾಲ ಮಾಹೆ ಪ್ರೊಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಆರ್.ಪೈ, ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್, ಟ್ರಸ್ಟಿ ವಸಂತಿ ಆರ್.ಪೈ, ಪ್ರೊ-ವೈಸ್ ಚಾನ್ಸಲರ್ ಡಾ.ದಿಲೀಪ್ ಜಿ.ನಾಯಕ್, ಡಾ.ಪ್ರಜ್ಞಾ ರಾವ್, ಡಾ.ನಾರಾಯಣ ಸಭಾಹಿತ್, ಡಾ.ಶರತ್ ಕೆ.ರಾವ್, ಡಾ.ಮಧು ವೀರ ರಾಘವನ್, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಪಿ., ಡಾ.ವಿನೋದ್ ವಿ.ಥಾಮಸ್ ಉಪಸ್ಥಿತರಿದ್ದರು.
ಚಿನ್ನದ ಪದಕ ವಿಜೇತರಾದ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಂಹಿತಾ ಡಿ. ಮತ್ತು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಅದಿತಿ ಮಜುಂದಾರ್ ಅವರನ್ನು ಅಭಿನಂದಿಸಲಾಯಿತು. ಮಂಗಳೂರಿನ ಡೀನ್ ಡಾ.ಆಶಿತಾ ಉಪ್ಪೂರ್ ವಂದಿಸಿದರು.