ಕುಂದಾಪುರ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣ ಮೃತ್ಯು

Update: 2023-09-29 15:43 GMT

ಕುಂದಾಪುರ, ಸೆ.29: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ದಂಪತಿ ದಾರುಣವಾಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಗ್ರಾಪಂ ವ್ಯಾಪ್ತಿಯ ಹೆಮ್ಮಾಡಿ ಸಮೀಪದ ಸುಳ್ಸೆ ಎಂಬಲ್ಲಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಸುಳ್ಸೆ ಯಕ್ಷಿ ಬ್ರಹ್ಮ ನಂದಿಕೇಶ್ವರ ದೈವಸ್ಥಾನ ಸಮೀಪದ ನಿವಾಸಿ ಮಹಾಬಲ ದೇವಾಡಿಗ(55) ಹಾಗೂ ಅವರ ಪತ್ನಿ ಲಕ್ಷ್ಮೀ ದೇವಾಡಿಗ(48) ಎಂದು ಗುರುತಿಸಲಾಗಿದೆ. ಮಹಾಬಲ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಮನೆ ಸಮೀಪದ ಕರಣಿಕರ ಮನೆ ಎಂಬಲ್ಲಿನ ಮನೆಯೊಂದಕ್ಕೆ ಕೆಲಸಕ್ಕೆ ತೆರಳಿದ್ದರು.

ಕರಣಿಕರ ಮನೆಯಲ್ಲಿ ಗುರುವಾರ ಅನಂತ ಚತುರ್ದಶಿಯ ಪೂಜಾ ಕೈಂಕರ್ಯಗಳಿದ್ದ ಹಿನ್ನೆಲೆಯಲ್ಲಿ ಮಹಾಬಲ ದೇವಾಡಿಗ ಇಂದು ಅವರ ಮನೆ ಶುಚಿಗೊಳಿಸಿ ತಮ್ಮ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಆಘಾತಗೊಂಡು ಸ್ಥಳದಲ್ಲಿಯೇ ಬಿದ್ದರು.

ಇತ್ತ ಲಕ್ಷ್ಮೀ, ಕೆಲಸಕ್ಕೆ ಹೋದ ಪತಿ ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ಬಾರದಿದ್ದಾಗ ಕರಣಿಕರ ಮನೆಗೆ ಹೋದರು. ಈ ವೇಳೆ ಕಾಲು ಹಾದಿ ಬಳಿಯ ತೋಡಿನಲ್ಲಿ ಮಹಾಬಲ, ವಿದ್ಯುತ್ ತಂತಿ ಹಿಡಿದುಕೊಂಡ ಸ್ಥಿತಿಯಲ್ಲಿ ಬಿದ್ದು ಕೊಂಡಿರುವುದು ಕಂಡುಬಂತು. ಲಕ್ಷ್ಮೀ ಕೂಗಿಕೊಂಡು ನೆರೆಕೆರೆಯವರನ್ನು ಕರೆದರು.

ಈ ವೇಳೆ ದೂರದಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಹೋಗದಂತೆ ಲಕ್ಷ್ಮೀ ಅವರಿಗೆ ಸೂಚಿಸಿದರೆನ್ನಲಾಗಿದೆ. ಆದರೂ ಇದನ್ನು ಲೆಕ್ಕಿಸದೆ ಪತಿಯ ರಕ್ಷಣೆಗೆ ಒದ್ದೆಯಾಗಿದ್ದ ಮರದ ಕೋಲು ಹಿಡಿದು ಮುಂದಾದರು. ಇದರಿಂದ ಲಕ್ಷ್ಮೀ ಅವರಿಗೂ ವಿದ್ಯುತ್ ಪ್ರವಹಿಸಿ ಸಮೀಪದ ಕೆರೆ ಬಳಿ ಎಸೆಯ ಲ್ಪಟ್ಟರು. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಇವರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ತಕ್ಷಣವೇ ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತ ಗೊಳಿಸಲು ಮಾಹಿತಿ ನೀಡಿದರು. ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಆಗಮಿಸಿದರೆನ್ನಲಾಗಿದೆ. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದು, ಓರ್ವ ಪುತ್ರ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಓರ್ವ ಪುತ್ರಿ ಮನೆಯಲ್ಲಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಕುಂದಾಪುರ ವೃತ್ತನಿರೀಕ್ಷಕ ಜಯರಾಮ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಆಗಮಿಸಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.

ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್, ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಸುಮತಿ, ಸ್ಥಳೀಯರಾದ ಶೇಖರ್ ಬಳೆಗಾರ ಭೇಟಿ ನೀಡಿದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಸ್ಕಾಂ ವಿರುದ್ಧ ಆಕ್ರೋಶ

ಪರಿಸರದಲ್ಲಿ ಬೆಳಗ್ಗೆಯಿಂದ ಗಾಳಿ-ಮಳೆ ಇದ್ದು, ನಾದುರಸ್ಥಿಯಲ್ಲಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮೆಸ್ಕಾಂ ಇಲಾಖೆಯ ನಿರ್ಲಕ್ಷವೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾಬಲ ದೇವಾಡಿಗ ಸಾವನ್ನಪ್ಪಿದ ಕಾಲು ದಾರಿಯ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಅನೇಕ ಕಡೆಗಳಲ್ಲಿ ತುಂಡಾದ ತಂತಿಗಳನ್ನು ಜೋಡಿಸಲಾಗಿದೆ. ಈ ದಾರಿಯಲ್ಲಿ ಸುಳ್ಸೆಯಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೂ ಕೂಡ ನಿತ್ಯ ಸಂಚರಿಸುತ್ತಾರೆ. ಆದುದರಿಂದ ಮೆಸ್ಕಾಂ ಇಲಾಖೆಯ ನಿರ್ಲಕ್ಷದ ಬಗ್ಗೆ ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News