ಕುಂದಾಪುರ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮಲೆಕ್ಕಾಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರ

Update: 2024-09-26 15:13 GMT

ಕುಂದಾಪುರ, ಸೆ.26: ಕೆಲಸ ಮಾಡಲು ಪೂರಕವಾಗಿ ಬೇಕಾಗಿರುವ ತಂತ್ರಾಂಶಗಳನ್ನು ಒದಗಿಸದೇ, ಯೋಜನೆಗಳ ಬಗ್ಗೆ ತರಬೇತಿ ನೀಡದೇ ವಿವಿಧ ಇಲಾಖೆಗಳು ಹೊಸ-ಹೊಸ ಆದೇಶಗಳನ್ನು ನೀಡಿ ಗ್ರಾಮಲೆಕ್ಕಾಧಿಕಾರಿಗಳಿಂದ ಕೆಲಸಗಳನ್ನು ನಿರೀಕ್ಷಿಸುತ್ತಿರುವುದು ತಪ್ಪು. ಖಾಲಿ ಇರುವ ಹುದ್ದೆಗಳನ್ನು ಮೊದಲು ಭರ್ತಿ ಮಾಡಿ ಆ ಬಳಿಕ ಹೊಸ ಯೋಜನೆಗಳನ್ನು ಹೊರತಂದರೆ ಗ್ರಾಮಲೆಕ್ಕಾಧಿಕಾರಿಗಳು ಅದಕ್ಕೆ ಬದ್ದರಾಗಿ ಕೆಲಸ ಮಾಡುತ್ತಾರೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಹೇಳಿದ್ದಾರೆ.

ಗುರುವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ (ರಿ) ಕುಂದಾಪುರ ತಾಲೂಕು ಘಟಕದ ವತಿಯಿಂದ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕ ರಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡುತಿದ್ದರು.

ಒಬ್ಬ ಗ್ರಾಮಲೆಕ್ಕಾಧಿಕಾರಿಯನ್ನು ಎರಡರಿಂದ ಮೂರು ಗ್ರಾಮಗಳಿಗೆ ನಿಯೋಜನೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಮಧ್ಯದಲ್ಲೇ ಬೇರೆ ಬೇರೆ ಇಲಾಖೆಗಳ ಹೊಸ-ಹೊಸ ಪ್ರಯೋಗದಿಂದ ಗ್ರಾಮಲೆಕ್ಕಾಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಬಂದೊದಗಿದೆ. ಸರಕಾರದ ಧ್ಯೇಯಧೋರಣೆಗಳನ್ನು ನಾವು ಒಪ್ಪುತ್ತೇವೆ. ಆದರೆ ಅದಕ್ಕೆ ಪೂರಕವಾಗಿ ಹುದ್ದೆಗಳನ್ನು ತುಂಬಬೇಕು ಎನ್ನುವುದು ನಮ್ಮ ಆಗ್ರಹ. ಸರಕಾರಿ ಆದೇಶಗಳನ್ನು ನೌಕರರಾಗಿ ನಾವು ಧಿಕ್ಕರಿಸುವುದಿಲ್ಲ. ಕೆಲಸಕ್ಕೆ ಪೂರಕವಾಗಿಬೇಕಾಗಿರುವ ಲ್ಯಾಪ್‌ಟಾಪ್, ಮೊಬೈಲ್ ಸೇರಿದಂತೆ ಇನ್ನಿತರ ತಾಂತ್ರಿಕ ಉಪಕರಣಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತೀ ವಿಚಾರದಲ್ಲಿಯೂ ಕೆಳಮಟ್ಟದ ಅಧಿಕಾರಿಗಳನ್ನು ಗುರಿಯಾಗಿಸಿ ಆಧಾರ ರಹಿತವಾಗಿ ನೋಟೀಸ್ ನೀಡಿ ವರ್ಗಾವಣೆ ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಆಧಾರ್ ಲಿಂಕ್ ಜೋಡಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವಿದೇಶದಲ್ಲಿ ನೆಲೆಸಿರು ವವರ ಒಟಿಪಿಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲವಾ ದ್ದರಿಂದ ಆಧಾರ್ ಲಿಂಕ್ ಜೋಡಣೆ ಪ್ರಕ್ರಿಯೆಗಳು ನಿಧಾನವಾಗಿ ಆಗುತ್ತಿವೆ ಎಂದವರು ಹೇಳಿದರು.

ಆದರೆ ಇದೇ ಕಾರಣಗಳನ್ನಿಟ್ಟುಕೊಂಡು ಗ್ರಾಮಲೆಕ್ಕಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ತಾಂತ್ರಿಕ ಸಮಸ್ಯೆಗಳನ್ನು ಅರಿಯದೇ ಅವರನ್ನು ಕೆಲಸದಿಂದ ಅಮಾನತುಗೊಳಿಸುವುದು ಸರಿಯಾದ ಕ್ರಮವಲ್ಲ. ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಮುಂಭಡ್ತಿಯೂ ಸಿಗುತ್ತಿಲ್ಲ. ಅನೇಕ ಭಾಗಗಳಲ್ಲಿ ಗ್ರಾಮಲೆಕ್ಕಾಧಿಕಾರಿಗಳಿಗೆ ಕಟ್ಟಡದ ಕೊರತೆ ಇದ್ದು, ಮೂಲಭೂತ ಸೌಕರ್ಯಗಳಿಲ್ಲದ ಬ್ರಿಟಿಷರ ಕಾಲದ ಕಟ್ಟಡಗಳಲ್ಲಿ ದಾಖಲೆಗಳನ್ನಿಟ್ಟು ಬರಲು ಧೈರ್ಯ ಬರುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ರಾಜ್ಯ ಮಟ್ಟದ ಹೋರಾಟಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ಬೆಂಬಲ ಇದೆ ಎಂದರು.

ಮುಷ್ಕರದಲ್ಲಿ ನಿವೃತ್ತ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಶಿವರಾಯ್ ಎಸ್, ಉಪಾಧ್ಯಕ್ಷ ಆನಂದ್ ಕುಮಾರ್, ಕಾರ್ಯದರ್ಶಿ ವಿಘ್ನೇಶ್ ಉಪಾಧ್ಯಾಯ, ಪ್ರಮುಖರಾದ ಕಾಂತರಾಜು, ಅವಿನಾಶ್ ಗುರುಕೃಪಾ ಮೊದಲಾದವರು ಭಾಗವಹಿಸಿದ್ದರು.

ಬೈಂದೂರು: ಬೆಂಗಳೂರಿನ ಕೇಂದ್ರ ಸಂಘದ ನಿರ್ದೇಶನದಂತೆ ಬೈಂದೂರು ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ವತಿಯಿಂದ ಬೈಂದೂರು ತಾಲೂಕು ಆಡಳಿತ ಕಚೇರಿ ಎದುರು ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಗುರುವಾರ ಪ್ರಾರಂಭಿಸಲಾಗಿದೆ.

ಮುಷ್ಕರನಿರತರನ್ನುದ್ದೇಶಿಸಿ ಬೈಂದೂರು ತಾಲೂಕು ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಗಣೇಸ ಮೇಸ್ತ ಮಾತನಾ ಡಿದರು. ಉಪಾಧ್ಯಕ್ಷ ಸಂದೀಪ್ ಭಂಡಾರ್ಕರ್, ಪ್ರಧಾನ ಕಾರ್ಯದರ್ಶಿ ವೀರೇಶ್ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್. ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News