ಕುಂದಾಪುರ: ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆ ನೌಕರ ಲೋಕಾಯುಕ್ತ ಬಲೆಗೆ
ಕುಂದಾಪುರ, ನ.29: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಅರಣ್ಯ ಇಲಾಖೆಯ ನೌಕರರನ್ನು ಲೋಕಾಯುಕ್ತ ಪೊಲೀಸರು ಇಂದು ಬಂಧಿಸಿದ್ದಾರೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ ಬಂಧಿತ ಆರೋಪಿ. ಅರಣ್ಯ ಇಲಾಖೆ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬವರ ವಾಹನ ಬಿಡುಗಡೆಗಾಗಿ ಮಂಜುನಾಥ್ ಪೂಜಾರಿ 15 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದನು.
ಲಂಚ ನೀಡಲು ಒಪ್ಪದ ಆದಿತ್ಯ ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ಅದರಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು.
ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹಾಗೂ ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್ ಈ ಕಾರ್ಯಾಚರಣೆ ನಡೆಸಿದ್ದಾರೆ.