ಕುಂದಾಪುರ: ಬಸ್‌ ಪಲ್ಟಿಯಾಗಿ 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

Update: 2023-10-18 16:25 GMT

ಕುಂದಾಪುರ, ಅ.18: ಖಾಸಗಿ ಬಸ್ಸೊಂದು ಡಿವೈಡರ್‌ಗೆ ತಾಗಿದ ಪರಿಣಾಮ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ 15ಕ್ಕೂ ಅಧಿಕ ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆ ಸಮೀಪದ ಅರಾಟೆ ಎಂಬಲ್ಲಿ ಬುಧವಾರ ಸಂಜೆ 7:30ರ ಸುಮಾರಿಗೆ ಸಂಭವಿಸಿದೆ.

ಕುಂದಾಪುರದಿಂದ ಬೈಂದೂರು ಕಡೆಗೆ ಸಂಚರಿಸುತ್ತಿದ್ದ ಬಸ್ ಚಾಲಕನ ವೇಗದ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಗಂಗೊಳ್ಳಿ ಎಸ್ ಐ ಹರೀಶ್ ಆರ್. ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ಹೆದ್ದಾರಿಯ ವಾಹನ ದಟ್ಟಣೆ ನಿವಾರಿಸುವಲ್ಲಿ ನೆರವಾದರು. ಗಾಯಾಳುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಗಂಗೊಳ್ಳಿಯ 24*7 ಆಂಬುಲೆನ್ಸ್‌ನ ಇಬ್ರಾಹಿಂ ಗಂಗೊಳ್ಳಿ ಹಾಗೂ ಸ್ಥಳೀಯರು ಗಾಯಾಳುಗಳನ್ನು ಕುಂದಾಪುರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲು ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News