ಕುಂದಾಪುರ ಪುರಸಭೆ ವ್ಯಾಪ್ತಿಯ ಆಟೋ ರಿಕ್ಷಾ ನಿಲ್ದಾಣಗಳ ಸಮಸ್ಯೆ ಬಗೆಹರಿಸಲು ಆಗ್ರಹ

Update: 2023-10-04 14:16 GMT

ಕುಂದಾಪುರ, ಅ.4: ಆಟೋ ಚಾಲಕ ಮಾಲಕರನ್ನು ಕುಂದಾಪುರ ಪುರಸಭೆ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದು ಕಳೆದ ಮೂರು ನಾಲ್ಕು ದಶಕಗಳಿಂದ ಸೂಕ್ತ ನಿಲ್ದಾಣವನ್ನು ಈವರೆಗೆ ಗುರುತಿಸಿಲ್ಲ. ನಮ್ಮ ಬೇಡಿಕೆಗಳನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ ರಿಕ್ಷ್ಷಾ ಚಾಲಕರು ಬಂದ್ ನಡೆಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಭಾರತೀಯ ಮದ್ದೂರ್ ಸಂಘದ ಸ್ಥಾಪಕಾಧ್ಯಕ್ಷ ಶಂಕರ್ ಅಂಕದಕಟ್ಟೆ ಎಚ್ಚರಿಕೆ ನೀಡಿದ್ದಾರೆ.

ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ಕುಂದಾಪುರದಿಂದ ಬುಧವಾರ ಕುಂದಾಪುರ ಪ್ರೆಸ್ಕ್ಲಬ್‌ನಲ್ಲಿ ಕರೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 34 ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನ ನಿಲ್ದಾಣಗಳಿದ್ದು ಜನರಿಗೆ ಸೇವೆ ಒದಗಿಸುತ್ತಿದೆ. ಚಾಲಕರು-ಮಾಲಕರ ಕಷ್ಟದ ಜೀವನ ಅರಿಯದ ಸ್ಥಳೀಯಾಡಳಿತ ಬೇಜವಬ್ದಾರಿ ನೀತಿ ಅನುಸರಿಸುತ್ತಿದ್ದು ಇದನ್ನು ಕೊನೆಗಾಣಿಸಲು ಪಕ್ಷಬೇಧ ಮರೆತು ಮೂರು ಸಂಘಟನೆಗಳು ಒಂದಾಗಿವೆ ಎಂದರು.

ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಚಾಲಕರ ಸಂಘ(ಇಂಟಕ್) ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ, ರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನಗಳು ಬಡವರ್ಗದವರ ಬದುಕಿನ ದಾರಿ. ಕುಂದಾಪುರದಂತಹ ನಗರಗಳಲ್ಲಿ ನಿಲ್ದಾಣದಲ್ಲಿಯೇ ನಿಂತು ಬಾಡಿಗೆ ಕಾಯಬೇಕಾಗಿದೆ. ಆಡಳಿತ ಹಾಗೂ ಅಧಿಕಾರಿ ವ್ಯವಸ್ಥೆಯು ಅಟೋ ರಿಕ್ಷಾಗಳ ನಿಲ್ದಾಣಕ್ಕೆ ಸ್ಥಳ ನಿಗದಿಪಡಿಸುವಲ್ಲಿ ಇಚ್ಚಾಶಕ್ತಿ ತೋರುತ್ತಿಲ್ಲ. ನಿತ್ಯ ಜನರಿಗೆ ಸೇವೆ ನೀಡುವ ದುಡಿಯುವ ವರ್ಗಕ್ಕೆ ಸ್ಪಂದನೆಯಿಲ್ಲ. ವಿನಾಯಕ ರಿಕ್ಷಾ ನಿಲ್ದಾಣ ಸಹಿತ ಬಹುತೇಕ ಎಲ್ಲಾ ನಿಲ್ದಾಣಗಳು ಖಾಸಗಿಯವರ ಜಾಗದ ಎದುರು ಇದೆ ಎಂದು ತಿಳಿಸಿದರು.

ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕ ಸಂಘ (ಸಿಐಟಿಯು) ಅಧ್ಯಕ್ಷ ರಮೇಶ್ ವಿ. ಮಾತನಾಡಿ, ಪ್ರಸಿದ್ಧ ಕೋಡಿ ಪ್ರವಾಸಿ ತಾಣಕ್ಕೆ ಪ್ರವಾಸಿಗರು ತೆರಳಲು ವಿನಾಯಕ ರಿಕ್ಷಾ ನಿಲ್ದಾಣ ಅಗತ್ಯ. ಬದುಕು ಕಟ್ಟಿಕೊಂಡ ಇಲ್ಲಿನ 20-30 ರಿಕ್ಷಾ ಚಾಲಕರ ಬದುಕು ಅತಂತ್ರವಾಗಿದೆ. ಮೊದಲಿನ ಸ್ಥಳಕ್ಕೆ ಸಮೀಪದಲ್ಲದರೂ ಸ್ಥಳ ಗುರುತಿಸಿ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಗ್ರಂಥಾಲಯ ಸಮೀಪ ನಿಲ್ದಾಣಕ್ಕೆ ಸ್ಥಳ ಗುರುತಿಸುವುದು ಯಾವ ರೀತಿಯಲ್ಲೂ ಪೂರಕವಲ್ಲ ಎಂದು ಹೇಳಿದರು.

ಭಾರತೀಯ ಮದ್ದೂರ್ ಸಂಘದ ಕುಂದಾಪುರ ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಸುರೇಶ್ ಆಟೋ ರಿಕ್ಷಾ, ಟ್ಯಾಕ್ಸಿ, ಮೆಟಾಡೋರ್ ಚಾಲಕ ಸಂಘದ ಕಾರ್ಯದರ್ಶಿ ಉದಯ್, ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕ ಸಂಘದ ಪದಾಧಿಕಾರಿಗಳು, ಚಂದ್ರಶೇಖರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News