ಕುಂದಾಪುರ : ಕೋಮು ಸೌಹಾರ್ದತೆಗೆ ಸಾಕ್ಷಿಯಾದ ನವರಾತ್ರಿ ಮೆರವಣಿಗೆ - ಉರೂಸ್ ಕಾರ್ಯಕ್ರಮ

Update: 2023-10-24 11:17 GMT

ಕುಂದಾಪುರ : ನಗರದಲ್ಲಿ ಸೋಮವಾರ ಸಂಜೆ ನಡೆದ ವಿವಿಧ ಮೂರು ಕಡೆಗಳ ನವರಾತ್ರಿ ಶಾರದೆ ವಿಸರ್ಜನಾ ಮೆರವಣಿಗೆ ಹಾಗೂ ದರ್ಗಾದ ಉರೂಸ್ ಕಾರ್ಯಕ್ರಮವು ಸಮನ್ವಯತೆ ಸಾಧಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು.

ಕುಂದಾಪುರದ ಶ್ರೀರಾಮಮಂದಿರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ರಕ್ತೇಶ್ವರಿ ದೇವಸ್ಥಾನದ ನವರಾತ್ರಿಯ ಶಾರದಾ ದೇವಿ ವಿಸರ್ಜನಾ ಮೆರವಣಿಗೆ ಮತ್ತು ಹಝ್ರತ್ ಸುಲ್ತಾನ್ ಯೂಸುಫ್ ವಲಿಯಲ್ಲಾಹಿ ದರ್ಗಾದ ವಾರ್ಷಿಕ ಉರೂಸ್ ಕಾರ್ಯಕ್ರಮ ಸೋಮವಾರ ಸಂಜೆ ಏಕಕಾಲದಲ್ಲಿ ಜರಗಬೇಕಾಗಿತ್ತು. ಈ ಸಂಬಂಧ ಪೊಲೀಸರು ಮೊದಲೇ ಎರಡು ಧರ್ಮದ ಮುಖಂಡರ ಬಳಿ ಸಮನ್ವಯತೆ ಸಾಧಿಸಿ ಮೂರು ಮೆರವಣಿಗೆ ಹಾಗೂ ಉರೂಸ್ ಕಾರ್ಯಕ್ರಮ ಸಂಭ್ರಮದಿಂದ ಜರಗುವ ಸಲುವಾಗಿ ಸಮಯ ನಿಗದಿ ಮಾಡಿದ್ದರು.

ಅದರಂತೆಯೇ ರಾಮ ಮಂದಿರ ಮತ್ತು ವೆಂಕಟರಮಣ ದೇವಸ್ಥಾನದ ಮೆರವಣಿಗೆ ಬೇರೆ ಬೇರೆ ಸಮಯದಲ್ಲಿ ನಡೆದಿದ್ದು ಇದರ ನಡುವಿನ ಸಮಯದಲ್ಲಿ ಉರೂಸ್ ಮೆರವಣಿಗೆ ಸಾಗಿತು. ಉರೂಸ್ ಹಿನ್ನೆಲೆಯಲ್ಲಿ ದರ್ಗಾ ಸಮೀಪದಿಂದ ಫೆರ್ರಿ ರಸ್ತೆ ಪಾರ್ಕ್ ತನಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಉರೂಸ್ ಪ್ರಯುಕ್ತ ಹಾಕಲಾದ ವಿದ್ಯುತ್ ದೀಪಾಲಂಕಾರ ಹಾಗೂ ಸ್ವಾಗತ ಕಮಾನು ರಾಮಮಂದಿರ, ವೆಂಕಟರಮಣ ದೇವಸ್ಥಾನದಲ್ಲಿನ ಶಾರದಾ ಮೂರ್ತಿ ಮೆರವಣಿಗೆಗೆ ತಡೆಯಾಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಕಮಾನಿನ ಮೇಲ್ಭಾಗವನ್ನು ಮುಸ್ಲಿಮರು ತೆರವು ಮಾಡಿದರು. ಅದೇ ರೀತಿ ವಿದ್ಯುತ್ ದೀಪಾಲಂಕಾರಕ್ಕೆ ತಗುಲದಂತೆ ಅಗತ್ಯ ಕ್ರಮಗಳನ್ನು ಮಾಡಿ ಕೊಟ್ಟು ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.

ದರ್ಗಾದ ಎದುರು ಮೆರವಣಿಗೆ ತೆರಳುವಾಗ ಜಾಗಟೆ, ಚಂಡೆ ಬಾರಿಸುವು ದನ್ನು ನಿಲ್ಲಿಸಿ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಲಾಯಿತು. ಈ ವೇಳೆ ದರ್ಗಾ ಬಳಿ ಜಮಾಯಿಸಿದ್ದ ಮುಸ್ಲಿಮರು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದ ಹಿಂದೂಗಳಿಗೆ ಹಬ್ಬದ ಶುಭಾಶಯ ಕೋರಿದರು.

ಮುಖಂಡರಾದ ಅಬು ಮುಹಮ್ಮದ್ ಕುಂದಾಪುರ, ರಫೀಕ್ ಅಹಮದ್ ಗಂಗೊಳ್ಳಿ, ಶ್ರೀರಾಮಮಂದಿರ ದೇವಸ್ಥಾನದ ದೇವಕಿ ಸಣ್ಣಯ್ಯ, ವೆಂಕಟರಮಣ ದೇವಸ್ಥಾನದ ತ್ರಿವಿಕ್ರಮ ಪೈ, ಕೇಶವ ಭಟ್, ರಕ್ತೇಶ್ವರಿ ದೇವಸ್ಥಾನದ ವಿಶ್ವನಾಥ ಶೆಟ್ಟಿ, ಶ್ರೀಧರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಕುಂದಾಪುರ ಪೊಲೀಸ್ ನಿರೀಕ್ಷಕ ನಂದಕುಮಾರ್, ಕುಂದಾಪುರ ಉಪ ವಿಭಾಗದ ವಿವಿಧ ಪೊಲೀಸ್ ಠಾಣೆ ಉಪನಿರೀಕ್ಷಕರು, ಸಿಬ್ಬಂದಿಗಳು ಹಾಜರಿದ್ದರು. ಭದ್ರತೆಗಾಗಿ ಸ್ಥಳದಲ್ಲಿ ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.












 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News