ಕುಂದಾಪುರ: ಮಣಿಪುರ ಹಿಂಸಾಚಾರ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2023-08-02 16:51 GMT

ಕುಂದಾಪುರ: ಎಲ್ಲೋ ಗಲಭೆಗಳಾಗಿ ಹೆಣ ಬಿದ್ದಾಗ ಮಾತನಾಡುವ ಸಂಸದೆ ಶೋಭಾ ಕರಂದ್ಲಾಜೆ ಮಣಿಪುರದಲ್ಲಿ ಮಹಿಳೆಯರಿಗಾದ ಘಟನೆಯ ಕುರಿತು ಒಂದೂ ಹೇಳಿಕೆ ನೀಡುತ್ತಿಲ್ಲ. ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಉಡುಪಿ ಶಾಸಕರಿಂದ ಉಡುಪಿ ಘಟನೆಗೆ ಪ್ರತಿಭಟನೆ ನಡೆದರೂ ಮಣಿಪುರ ಘಟನೆ ಕುರಿತು ಕಳಕಳಿ ಇಲ್ಲ. ಪ್ರಜ್ಞಾವಂತ ಎಂದು ಬಿಂಬಿಸಿಕೊಳ್ಳುವ ಬಿಜೆಪಿ ವಿಧಾನ ಪರಿಷತ್ ಸದಸ್ಯರೂ ಕೂಡ ತುಟಿಬಿಚ್ಚಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಲ್ಕೆಬೈಲು ಕಿಡಿಕಾರಿದರು.ಹೇಳಿದರು.

ಮಣಿಪುರ ರಾಜ್ಯದ ನಾಗರಿಕರ ಪರವಾಗಿ ಮತ್ತು ಮಣಿಪುರ ರಾಜ್ಯ ಹಾಗೂ ಕೇಂದ್ರ ಬಿ.ಜೆ.ಪಿ ಸರಕಾರದ ವಿರುದ್ಧ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕುಂದಾಪುರ ಶಾಸ್ತ್ರಿ ವೃತ್ತದ ತಾಲೂಕು ಪಂಚಾಯತ್ ಕಚೇರಿ ಎದುರು ಬುಧವಾರ ಹಮ್ಮಿಕೊಂಡ 'ಪ್ರತಿಭಟನಾ ಕಾರ್ಯಕ್ರಮ'ದಲ್ಲಿ ಮಾತನಾಡಿದರು.

ರಾಜಕೀಯ ಮಾಡಲು ರಾಜಕಾರಣದಲ್ಲಿ ಇರಬೇಡಿ. ಕೋಮು ದಳ್ಳೂರಿ ಹಬ್ಬುವ ಕೆಲಸ ಜಿಲ್ಲೆಯಲ್ಲಿ ಆಗದಿರಲಿ. ಅಖಂಡ ಭಾರತದ ಅವಿಭಾಜ್ಯ ಅಂಗವಾದ ಮಣಿಪುರದ ಮಹಿಳೆಯರ ಪರವಾಗಿ ಧ್ವನಿಯಾಗೋಣ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಕೆಲಸ ಮಾಡುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಮಣಿಪುರದ ಎರಡು ಸಮುದಾಯಗಳ ನಡುವಿನ ದ್ವೇಷದ ಕಿಚ್ಚು ಯಾವುದೋ ದಾರಿ ಹಿಡಿದು ಹೊತ್ತಿ ಉರಿಯುವ ಸ್ಥಿತಿಯಲ್ಲಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರಕಾರ ಮುಂದಾಗಿಲ್ಲ. ಮಹಿಳೆಯರ ರಕ್ಷಣೆ ಕುರಿತಾದ ಬಿಜೆಪಿ ಕಾಳಜಿ ನಿಜವೇ ಎಂಬ ಪ್ರಶ್ನೆ ಕಾಡುತ್ತದೆ. ಮೌನ ಮುರಿಯದ ಪ್ರಧಾನಿಯಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ರಾಮರಾಜ್ಯದ ಕನಸು ಕಂಡ ಗಾಂಧೀಜಿಯವರ ಸ್ತ್ರೀ ರಕ್ಷಣೆ ಕಲ್ಪನೆ ಇಂದು ಕೂಡ ಸಾಕಾರ ವಾಗಿಲ್ಲ ಎನ್ನುವುದಕ್ಕೆ ಮಣಿಪುರದ ಪ್ರಕರಣ ಜ್ವಲಂತ ಸಾಕ್ಷಿ. ದೇಶ ಅಪಾಯದಲ್ಲಿದೆ ಎಂಬುದು ಇದರಿಂದ ತಿಳಿಯುತ್ತಿದೆ. ದೇಶದ ಇತಿಹಾಸದಲ್ಲಿ ಇಂತಹ ಕೃತ್ಯ ನಡೆದಿಲ್ಲ. ಆಳುವ ಸರಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳದಿರುವುದು ದುರಂತ. ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ಹುಟ್ಟಿದ ಪ್ರಜ್ಞಾವಂತ ನಾಗರಿಕರು ಇದನ್ನು ಖಂಡಿಸಬೇಕಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೋರಾಟ ಕೈಗೆತ್ತಿಕೊಂಡಿದೆ. ಬಿಜೆಪಿಗರು ಯಾವುದೇ ಕೆಲಸ ಮಾಡಿ ದರೂ ಓಟ್ ಬ್ಯಾಂಕಿಗಾಗಿ ಮಾತನಾಡುತ್ತಾರೆ ಹೊರತು ಸಮಾಜಮುಖಿಯಾಗಿಲ್ಲ. ಭೂಟಾಟಿಕೆಯ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮಾತನಾಡಿದರು.

ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಶ್ಬಕ್, ಶ್ರೀಧರ್ ಶೇರಿಗಾರ್, ಪಂಚಾಯತ್ ಸದಸ್ಯರಾದ ವಿದ್ಯಾಧರ್, ಸೌಮ್ಯ ಮೊಗವೀರ, ಗಣಪತಿ ಶೇಟ್, ರೋಶನ್ ಬರೆಟ್ಟೊ. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಮುಖಂಡರಾದ ಚಂದ್ರ ಅಮೀನ್, ಚಂದ್ರ ಶೇಖರ ಶೆಟ್ಟಿ, ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಶನ್ ಶೆಟ್ಟಿ, ಎನ್‌ಎಸ್‌ಯುಐ ಅಧ್ಯಕ್ಷ ಸುಜನ್ ಶೆಟ್ಟಿ, ಗಂಗಾಧರ್ ಶೆಟ್ಟಿ, ನಾರಾಯಣ ಆಚಾರ್, ಕೇಶವ್ ಭಟ್, ಮೊದಲಾದವರು ಇದ್ದರು. ವಿನೋದ್ ಕ್ರಾಸ್ಟೊ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News