ಕುಂದಾಪುರ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

Update: 2024-04-25 05:29 GMT

ಕುಂದಾಪುರ, ಎ.25: ಬಡಗುತಿಟ್ಟಿನ ಯಕ್ಷಗಾನದ ಪ್ರಸಿದ್ಧ ಹಾಗೂ ಜನಪ್ರಿಯ ಭಾಗವತರಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ (67) ಎ.25 ರ ಮುಂಜಾನೆ ಬೆಂಗಳೂರಿನ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಧಾರೇಶ್ವರ ಅವರು ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 46 ವರ್ಷಗಳ ಸೇವೆ ಸಲ್ಲಿಸಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಚಿಕ್ಕಂದಿನಿಂದಲೂ ಸಂಗೀತಾಭ್ಯಾಸ ‌ಮಾಡುತಿದ್ದರು. ಶಿರಸಿ ಮೇಳದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ಬಳಿಕ ಪೆರ್ಡೂರು ಮೇಳ ಸೇರಿದ್ದ ಧಾರೇಶ್ವರ ಅವರು  28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು.

ಪ್ರಸಿದ್ಧ ಬಡಗುತಿಟ್ಟಿನ ಭಾಗವತ ನಾರಣಪ್ಪ ಉಪ್ಪೂರರಿಂದ ಭಾಗವತಿಕೆ ಕಲಿತು ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ನಿರ್ದೇಶಿಸುವ ಮೂಲಕ ಅವರು ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು.

ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು. ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು.

ಬಡಗುತಿಟ್ಟಿನಲ್ಲಿ ಪ್ರಯೋಗಶೀಲ ಭಾಗವತರೆನಿಸಿದ್ದ ಇವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಸಂಜೆ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News