ಕುಂದಾಪುರ: ಪೊಲೀಸರಿಂದ ‘ವಾಕ್ ಆಂಡ್ ರನ್’ ಜಾಥಾ

Update: 2024-01-07 14:00 GMT

ಕುಂದಾಪುರ: ಮಾದಕ ವ್ಯಸನದ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ. ಮಾದಕ ವಸ್ತುವಿನಂಥ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಕುಂದಾಪುರದ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಹಾಗೂ ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಶೃತಿಶ್ರೀ ಎಸ್. ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್‌ನ ಕುಂದಾಪುರ ಉಪವಿಭಾಗದ ವತಿಯಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿಗಾಗಿ ‘ಸೇ ನೋ ಟು ಡ್ರಗ್ಸ್’ ಧ್ಯೇಯ ವಾಕ್ಯದಡಿ ರವಿವಾರ ಬೆಳಗ್ಗೆ ನಡೆದ ‘ವಾಕ್ ಆಂಡ್ ರನ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಮಾತನಾಡಿ, ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜನತೆ ಜಾಗೃತರಾಗಬೇಕು ಎಂದರು. ಕುಂದಾಪುರ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ ಮಾತನಾಡಿ, ಜೀವ ತೆಗೆಯುವ ಮಾದಕ ವಸ್ತುಗಳಿಂದ ಎಲ್ಲರೂ ದೂರವಿರಬೇಕು. ಆನ್‌ಲೈನ್ ಮೂಲಕ ಇಂತಹ ವಸ್ತುಗಳನ್ನು ಖರೀದಿಸುವ ಬಗ್ಗೆ ಇಲಾಖೆ ಕ್ರಮವಹಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಲು ಸಾಧ್ಯ ಎಂದರು.

ಕಂದಾಪುರ ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಕುಂದಾಪುರ ನಗರ ಠಾಣೆ ಇನ್‌ಸ್ಪೆಕ್ಟರ್ ನಂದಕುಮಾರ್, ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಜಯರಾಮ ಡಿ. ಗೌಡ, ಕುಂದಾಪುರ ಉಪವಿಭಾಗದ ವಿವಿಧ ಠಾಣೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಜನಜಾಗೃತಿ ಜಾಥಾ

ಕುಂದಾಪುರ ಪೊಲೀಸ್ ಠಾಣೆ ಎದುರಿನಿಂದ ಜನಜಾಗೃತಿ ಜಾಥಾ ಆರಂಭಗೊಂಡು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ ಶಾಸ್ತ್ರೀ ವೃತ್ತದ ಮೂಲಕ ಸಾಗಿ ಬಂದು ಮತ್ತೆ ಪೊಲೀಸ್ ಠಾಣೆವರೆಗೂ ಆಗಮಿಸಿತ್ತು.

ನ್ಯಾಯಾಧೀಶರು ಸಹಿತ ಕುಂದಾಪುರ ತಹಶೀಲ್ದಾರ್, ಉಪವಿಭಾಗದ ಪೊಲೀಸರು, ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಜಾಗೃತಿ ಜಾಥಾದಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳು ಗಮನಸೆಳೆದವು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News