ಉತ್ಸವಗಳಿಂದ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ: ಡಾ.ಜಯಪ್ರಕಾಶ್ ಶೆಟ್ಟಿ
ಕುಂದಾಪುರ: ಕುಂದಾಪ್ರ ಭಾಷೆಯನ್ನು ತಾತ್ವಿಕ ಹಿನ್ನೆಲೆಯಲ್ಲಿ ಗ್ರಹಿಸ ಬೇಕೆ ಹೊರತು ಉತ್ಸವಗಳನ್ನ ಮಾಡುವುದರ ಮೂಲಕ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ.ಜಯ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.
ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ವತಿಯಿಂದ ಆಯೋಜಿಸಲಾದ ’ಕುಂದಾಪ್ರದ್ದೇ ಮಾತ್ಕತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ದೇವನೂರು ಮಹಾದೇವ ಕುಸುಮ ಬಾಲೆ ಕೃತಿಯಲ್ಲಿ ಬಳಸಿದ ಭಾಷೆಯಂತೆ ಕುಂದಾಪ್ರ ಕನ್ನಡ ಭಾಷೆಯಲ್ಲಿಯೂ ಅಂತಹ ಮೌಲಿಕ ಕೃತಿಗಳು ರಚನೆಯಾಗಬೇಕು. ಇಂತಹ ಪ್ರಾದೇಶಿಕ ಭಾಷೆಗಳು ಒಂದು ಜನ ಜೀವನದ ಸಂಸ್ಕೃತಿ, ಆಚರಣೆ, ವಿಚಾರ, ನಡೆ-ನುಡಿಗಳನ್ನು ಗಂಭೀರವಾಗಿ ಪರಿಗಣಿಸು ವಂತೆ ಇರಬೇಕೇ ಹೊರತು ಹಾಸ್ಯದ ಸರಕಾಗಬಾರದು ಎಂದರು.
ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ.ರೇಖಾ ಬನ್ನಾಡಿ ಮಾತನಾಡಿ, ಇಂದಿನ ಯುವ ಪೀಳಿಗೆ ಕುಂದಾಪ್ರ ಭಾಷೆಯ ಸೊಗಡನ್ನು ಅರ್ಥೈಸಿಕೊಂಡು ಅದನ್ನು ಮುಂದುವರಿಸಿಕೊಂಡು ಹೋಗುವ ಕೆಲಸ ಆಗಬೇಕು ಎಂದರು.
ವ್ಯಂಗ್ಯ ಚಿತ್ರಕಾರರು ಮತ್ತು ಕುಂದಾಪ್ರ ಕನ್ನಡ ಭಾಷಾ ನಿಘಂಟು ಸಂಪಾದಕ ಪಂಜು ಗಂಗೊಳ್ಳಿ, ಕುಂದಾಪ್ರ ಕನ್ನಡ ನಿಘಂಟು ರಚನೆಯ ತಮ್ಮ ಅನುಭವ ಗಳನ್ನು ಹಂಚಿಕೊಂಡರು. ಹಿರಿಯರಾದ ಜಪ್ತಿಯ ಚಿಕ್ಕು, ಐತು ಮತ್ತು ಚಂದು ಕುಂದಾಪ್ರ ಕನ್ನಡದ ಸೊಗಡಿನ ಕೋಲು ಹುಯ್ಯುವ ಹಾಡನ್ನು ಪ್ರಸ್ತುತ ಪಡಿಸಿದರು. ನಂತರ ನಡೆದ ಸಂವಾದದಲ್ಲಿ ಡಾ.ದಿನೇಶ್ ಹೆಗ್ಡೆ, ಸಚ್ಚಿದಾನಂದ, ತಿಮ್ಮಪ್ಪ ಗುಲ್ವಾಡಿ ಮೊದಲಾದವರು ಭಾಗವಹಿಸಿದರು.
ಕುಂದಾಪುರ ಸಮುದಾಯದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಶವ ಸಸಿಹಿತ್ಲು ಹಾಗೂ ಉದಯ ಶೆಟ್ಟಿ ಸಹಕರಿಸಿದರು. ಸಮುದಾಯದ ರೋಹಿಣಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಶೆಟ್ಟಿ ವಂದಿಸಿದರು.