ಮಲ್ಪೆಯಲ್ಲಿ ದಲಿತ ಮಹಿಳೆಗೆ ಹಲ್ಲೆ ಪ್ರಕರಣ: ಬಂಧಿತ ಮೂವರು ಆರೋಪಿಗಳ ಬಿಡುಗಡೆಗೆ ಹೈಕೋರ್ಟ್ ಆದೇಶ

Update: 2025-03-27 21:26 IST
ಮಲ್ಪೆಯಲ್ಲಿ ದಲಿತ ಮಹಿಳೆಗೆ ಹಲ್ಲೆ ಪ್ರಕರಣ: ಬಂಧಿತ ಮೂವರು ಆರೋಪಿಗಳ ಬಿಡುಗಡೆಗೆ ಹೈಕೋರ್ಟ್ ಆದೇಶ
  • whatsapp icon

ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಹೈಕೋರ್ಟ್ ಇಂದು ಆದೇಶ ನೀಡಿದೆ.

ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಆರೋಪಿಗಳ ಪರ ವಕೀಲೆ ಊರ್ಮಿಳಾ ಪುಲ್ಲಟ್ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದ ಬಂಧಿತ ಆರೋಪಿಗಳಾದ ಲಕ್ಷ್ಮೀ, ಶಿಲ್ಪ ಮತ್ತು ಸುಂದರ್ ಎಂಬವರನ್ನು ಬಿಡುಗಡೆಗೊಳಿಸುವಂತೆ ಆದೇಶ ನೀಡಿದೆ.

ಜಾಮೀನು ಅರ್ಜಿ ವಿಚಾರಣೆ: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ಬಂಧಿತ ಐವರು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು.

ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದು, ಆರೋಪಿಗಳ ಪರ ಹಿರಿಯ ವಕೀಲ ಶಾಂತಾರಾಮ್ ಶೆಟ್ಟಿ ವಾದ ಮಂಡಿಸಿದ್ದರು. ಈ ಮಧ್ಯೆ ಹೈಕೋರ್ಟ್ ಮೂವರು ಆರೋಪಿಗಳ ಬಿಡುಗಡೆಗೆ ಆದೇಶ ನೀಡಿತ್ತು. ಆದುದರಿಂದ ಉಳಿದ ಇಬ್ಬರು ಆರೋಪಿಗಳಿಗೆ ಸಂಬಂಧಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಮಾ.29ಕ್ಕೆ ಮುಂದೂಡಿ ನ್ಯಾಯಾಲಯ ಆದೇಶಿಸಿದೆ.

ಮಾ.18ರಂದು ಬೆಳಗ್ಗೆ 6ಗಂಟೆ ಸುಮಾರಿಗೆ ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ವಿಜಯನಗರ ಮೂಲದ ಲಕ್ಕಿ ಬಾಯಿ ಎಂಬವರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಲಕ್ಷ್ಮೀ, ಶಿಲ್ಪ, ಸುಂದರ್, ಲೀಲಾ ಮತ್ತು ಪಾರ್ವತಿ ಎಂಬವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News