ಪುರುಷರ ದಿನಾಚರಣೆ: ವಿವಿಧ ಮನೋರಂಜನಾತ್ಮಕ ಸ್ಪರ್ಧೆ
ಬ್ರಹ್ಮಾವರ : ಸಾಸ್ತಾನ ಸಂತ ಅಂತೋನಿ ಚರ್ಚಿನ ಸ್ತ್ರೀ ಸಂಘಟನೆ ಹಾಗೂ ಪ್ರಗತಿ ಸ್ವಸಹಾಯ ಸಂಘದ ಆಶ್ರಯದಲ್ಲಿ ಪುರುಷರ ದಿನಾಚರಣೆ ಕಾರ್ಯಕ್ರಮವನ್ನು ರವಿವಾರ ಆಯೋಜಿಸಲಾಗಿತ್ತು.
ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರು ವಂ.ಸುನೀಲ್ ಡಿಸಿಲ್ವಾ ಮಾತನಾಡಿ, ಕುಟುಂಬದ ಏಳಿಗೆಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಪ್ರತಿಯೊಬ್ಬ ಪುರುಷರ ಕಾರ್ಯವನ್ನು ವರ್ಣಿಸಲು ಅಸಾಧ್ಯ. ಪ್ರತಿಯೊಂದು ಮನೆಯ ಪುರುಷರು ತನ್ನ ಕುಟುಂಬಕ್ಕಾಗಿ ದುಡಿದ ರೀತಿಯನ್ನು ನೆನೆದು ಅವರಿಗಾಗಿ ಪುರುಷರ ದಿನವನ್ನಾಗಿ ಆಚರಿಸಿ ಅವರ ಸೇವೆಯನ್ನು ನೆನೆಯುವುದು ಶ್ಲಾಘನಾರ್ಹ ಸಂಗತಿಯಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ಧರ್ಮಪ್ರಾಂತ್ಯದ ಸಂಪದ ಸಂಸ್ಥೆಯ ಪ್ರತಿನಿಧಿ ಜುಡಿತ್ ಡಿಸೋಜ ಮಾತನಾಡಿ, ಕುಟುಂಬದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪುರಷರ ಪಾತ್ರ ಪ್ರಮುಖವಾಗಿದೆ. ಅವರು ತನ್ನ ಸಂತೋಷ ವನ್ನು ಬದಿಗೊತ್ತಿ ಕುಟುಂಬ ನಿರ್ವಹಣೆಗಾಗಿ ಸರ್ವರೀತಿಯಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುವರಿಂದಾಗಿ ಕುಟುಂಬಗಳು ಸಂತೋಷದಿಂದ ಇರಲು ಸಾಧ್ಯವಿದೆ. ಅವರ ಸೇವೆಯನ್ನು ಎಂದೂ ಕೂಡ ಕಡೆಗಣಿಸದರೆ ಪುರುಷರಿಗೆ ಗೌರವ ನೀಡುವ ಕಾರ್ಯ ಸದಾ ಜರುಗಬೇಕು ಎಂದರು.
ಸಂಘಟನೆಯ ಅಧ್ಯಕ್ಷ ಸಿಂತಿಯಾ ಡಿಸೋಜ ಮಾತನಾಡಿ, ಒಂದು ಕುಟುಂಬದ ಏಳಿಗೆಯಲ್ಲಿ ಮಹಿಳೆಯೊಂದಿಗೆ ಪುರುಷನ ಪಾತ್ರವೂ ಕೂಡ ಬಹುಮುಖ್ಯವಾಗಿದೆ. ಪುರುಷರು ಕುಟುಂಬದ ಮೇಲೆ ತೋರುವ ಜವಾಬ್ದಾರಿ ಹಾಗೂ ಅಕ್ಕರೆಯನ್ನು ವರ್ಣಿಸಲು ಅಸಾಧ್ಯವಾಗಿದೆ ಎಂದು ಹೇಳಿದರು.
ಚರ್ಚಿನ ಹಿರಿಯ ಸದಸ್ಯ ಜೆರೋಮ್ ಡಿಸೋಜ ಕೇಕ್ ಕತ್ತರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚರ್ಚಿನ ಜೀಜಸ್ ಮೇರಿ ಕಾನ್ವೆಂಟ್‌ನ ಮುಖ್ಯಸ್ಥೆ ಸಿಸ್ಟರ್ ಗೊರೆಟ್ಟಿ ಹಾಗೂ ಮಿಶನರಿ ಸಿಸ್ಟರ್ಸ್ ಆಫ್ ಆಜ್ಮೀರ್ ಕಾನ್ವೇಂಟ್‌ನ ಮುಖ್ಯಸ್ಥೆ ಸಿಸ್ಟರ್ ವೆರೋನಿಕಾ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಐವನ್ ಡಿ ಆಲ್ಮೇಡಾ, 20 ಆಯೋಗಗಳ ಸಂಚಾಲಕಿ ಜೀನ್ ಮೇರಿ ಲೂವಿಸ್ ಉಪಸ್ಥಿತರಿದ್ದರು.
ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ವೀರಾ ಪಿಂಟೊ ನಡೆಸಿಕೊಟ್ಟರು. ಕಾರ್ಯ ದರ್ಶಿ ಜೊಸ್ಲೀನ್ ಪಿಂಟೊ ವಂದಿಸಿದರು. ಮಾಲಾ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಪುರಷರಿಗಾಗಿ ವಿವಿಧ ರೀತಿಯ ಮನೋರಂಜನಾತ್ಮಕ ಸ್ಪರ್ಧೆ, ನೃತ್ಯವನ್ನು ಏರ್ಪಡಿಸಲಾಗಿತ್ತು.