ಮಾನಸಿಕ ಸಿದ್ಧತೆಯೇ ಆಟದ ಯಶಸ್ಸಿಗೆ ಮೂಲ ಕಾರಣ: ಆಶ್ವಿನ್ ಪಡುಕೋಣೆ
ಉಡುಪಿ: ಟೇಬಲ್ ಟೆನ್ನಿಸ್ ಆಟಕ್ಕೆ ಆತ್ಮವಿಶ್ವಾಸ ಬೇಕು. ಪೂರ್ವ ಸಿದ್ಧತೆಯಿಲ್ಲದೆ ಈ ಆಟ ಆಡುವುದು ಕಷ್ಟ. ಟೇಬಲ್ ಟೆನ್ನಿಸ್ ತರಬೇತಿ ಪಡೆಯುವ ವಾತಾವರಣವೂ ಆಟಕ್ಕೆ ಮುಖ್ಯ. ಮಾನಸಿಕ ಸಿದ್ಧತೆಯೇ ಆಟದ ಯಶಸ್ಸಿಗೆ ಮೂಲ ಮಂತ್ರ ಎಂದು ರಾಷ್ಟ್ರ ಮಟ್ಟದ ಬೆಳ್ಳಿ ಪದಕ ವಿಜೇತ ಟೇಬಲ್ ಟೆನ್ನಿಸ್ ಆಟಗಾರ ಆಶ್ವಿನ್ ಕುಮಾರ್ ಪಡುಕೋಣೆ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿರುವ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಟೇಬಲ್ ಟೆನ್ನಿಸ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಯಾಗಿ ಉಡುಪಿ ಕೆನರಾ ಬ್ಯಾಂಕಿನ ಡಿಜಿಎಂ ಶೀಬಾ ಸಹಾಜನ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ವಹಿಸಿದರು.
ಉಡುಪಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ವಿವಿ ಪರಿವೀಕ್ಷಕ ಗಣೇಶ್ ಕೋಟ್ಯಾನ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಮೇಶ್ ಕಾರ್ಲ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎ.ಮಾಲತಿದೇವಿ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕಿ ಜಯಶ್ರೀ ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿ ಅಂಕಿತಾ ರಾವ್ ವಂದಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.