ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆಯ ಸೂಕ್ತ ತನಿಖೆ ಕೈಗೊಳ್ಳಲು ಎಸ್ಪಿಗೆ ನಿರ್ದೇಶನ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ಇಡೀ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ಬೆಳಕಿಗೆ ಬಂದ ಸುಮಾರು 30 ಗಂಟೆಗಳ ಬಳಿಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘಟನೆ ಸಂಬಂಧ ಹೇಳಿಕೆಯನ್ನು ಇಂದು ಸಂಜೆ ವೇಳೆ ನೀಡಿದ್ದಾರೆ.
ನೇಜಾರುವಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಅಮಾನುಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಘಟನೆ ಕುರಿತಂತೆ ಸೂಕ್ತ ತನಿಖೆ ಕೈಗೊಳ್ಳಲು ನಿರ್ದೇಶನ ನೀಡಿ ದ್ದೇನೆ. ಅಲ್ಲದೆ ಅವರಿಂದ ನಿರಂತರ ಮಾಹಿತಿ ಪಡೆಯುತ್ತಿದ್ದೇನೆ. ಪ್ರಕರಣ ಸಂಬಂಧ 5 ತಂಡಗಳನ್ನು ರಚಿಸಲಾಗಿದ್ದು, ಶೀಘ್ರ ಪತ್ತೆ ಮಾಡುವ ವಿಶ್ವಾಸವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆ ನಡೆದು 24 ಗಂಟೆ ಕಳೆದರೂ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೆ ಯಾವುದೇ ರೀತಿಯ ಹೇಳಿಕೆ ನೀಡದಿರುವುದು ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸೇರಿದಂತೆ ಹಲವು ಗಣ್ಯರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಖಂಡಿಸಿ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವಂತೆ ಹೇಳಿಕೆ ನೀಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲೆಗೆ ಭೇಟಿ ನೀಡುವುದು ಬಿಡಿ ಒಂದು ಹೇಳಿಕೆ ಕೂಡ ನೀಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.