ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ದಾರಿ ಮಧ್ಯೆಯೇ ರಕ್ತಸಿಕ್ತ ಬಟ್ಟೆಯನ್ನು ಸುಟ್ಟು ಹಾಕಿದ್ದ ಹಂತಕ !

Update: 2023-11-19 17:29 GMT

ಪ್ರವೀಣ್ ಚೌಗುಲೆ

ಉಡುಪಿ, ನ.19: ನೇಜಾರಿನಲ್ಲಿ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ತನ್ನ ಕಾರಿನಲ್ಲಿ ಹೆಜಮಾಡಿ ಟೋಲ್‌ಗೇಟ್‌ನಿಂದ ಮಂಗಳೂರಿಗೆ ಹೋಗುತ್ತಿದ್ದ ದಾರಿ ಮಧ್ಯೆ ಆರೋಪಿ ಪ್ರವೀಣ್ ಚೌಗುಲೆ(39) ರಕ್ತಸಿಕ್ತ ಬಟ್ಟೆಯನ್ನು ಸುಟ್ಟು ಹಾಕಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ಬಯಲಾಗಿದೆ. ಆದರೆ ಅದರ ಕುರುಹು ಇನ್ನೂ ಪೊಲೀಸರಿಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಆರೋಪಿ ತನ್ನ ಬಟ್ಟೆಯಲ್ಲಿನ ರಕ್ತದ ಕಲೆಯನ್ನು ಮರೆ ಮಾಚಿಕೊಂಡೆ ಟೋಲ್ ಗೇಟ್‌ಗಿಂತ ಮುಂದೆ ನಿಲ್ಲಿಸಿದ್ದ ಕಾರಿನವರೆಗೆ ಬಸ್, ರಿಕ್ಷಾ, ಬೈಕ್‌ನಲ್ಲಿ ಹೋಗಿದ್ದು, ಅಲ್ಲಿಂದ ಕಾರಿನಲ್ಲಿ ಮಂಗಳೂರಿಗೆ ಹೋಗುವ ದಾರಿ ಮಧ್ಯೆ ಈ ರಕ್ತಸಿಕ್ತ ಬಟ್ಟೆ ಬದಲಾಯಿಸಿದ್ದನು. ಈ ವೇಳೆ ಯಾವುದೇ ಕುರುಹು ಸಿಗಬಾರದೆಂಬ ಉದ್ದೇಶದಿಂದ ಆ ಬಟ್ಟೆಯನ್ನು ಅಲ್ಲೇ ಸುಟ್ಟು ಹಾಕಿದ್ದ ಎಂಬುದನ್ನು ತನಿಖೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದರೆ ಆ ಬಟ್ಟೆ ಎಲ್ಲಿ ಸುಟ್ಟು ಹಾಕಿದ್ದಾನೆ ಎಂಬುದು ಇನ್ನು ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಅದರ ಕುರುಹುವಿಗಾಗಿ ಪೊಲೀಸರು ನಾಳೆ ಆರೋಪಿ ಜೊತೆ ಹುಡುಕಾಟ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಪ್ರವೀಣ್ ಬಗ್ಗೆ ಪತ್ನಿಗೆ ಸಂಶಯ

ಗಗನಸಖಿ ಹಾಗೂ ತನ್ನ ಸಹದ್ಯೋಗಿ ಐನಾಝ್ ಹಿಂದೆ ಬಿದ್ದು ಕಾಡುತ್ತಿದ್ದ ಪ್ರವೀಣ್ ಚೌಗುಲೆಯ ನಡವಳಿಕೆ ಬಗ್ಗೆ ಪತ್ನಿಗೆ ಮೊದಲೇ ಸಂಶಯ ಇತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಈತ ಪತ್ನಿ ಜೊತೆ ಉತ್ತಮ ಸಂಬಂಧ ಹೊಂದಿದ್ದನು. ಆದರೂ ಪತ್ನಿಗೆ ಆತ ಹೆಣ್ಣು ಮಕ್ಕಳ ಸಹವಾಸ ಇಟ್ಟುಕೊಂಡಿದ್ದನು ಎಂಬ ಸಂಶಯ ಅವರನ್ನು ಕಾಡುತ್ತಿತ್ತು. ಈ ಅನುಮಾನಕ್ಕೆ ಆತನ ನಡುವಳಿಕೆಗಳೇ ಕಾರಣವಾಗಿದ್ದವು. ಈ ಬಗ್ಗೆ ಹಲವು ಬಾರಿ ಆಕೆ ಪ್ರವೀಣ್ ಜೊತೆ ಜಗಳ ಮಾಡಿದ್ದಳೆಂದು ತಿಳಿದುಬಂದಿದೆ.

ಆದರೆ ಆಕೆಗೆ ಐನಾಝ್ ವಿಚಾರ ಏನು ಗೊತ್ತಿರಲಿಲ್ಲ ಎಂಬುದನ್ನು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ ಎಂದು ಮೂಲಗಳು ಹೇಳಿವೆ. ಕೃತ್ಯ ಎಸಗುವ ವೇಳೆ ತನ್ನ ಕೈಗೆ ಆಗಿರುವ ಗಾಯದ ಬಗ್ಗೆಯೂ ಪ್ರವೀಣ್ ಪತ್ನಿಗೆ ಸರಿಯಾಗಿ ಹೇಳದೆ ಮುಚ್ಚಿಟ್ಟಿದ್ದನು ಎಂದು ತಿಳಿದುಬಂದಿದೆ.

ತಿಂಗಳಿಗೆ 90 ಸಾವಿರದಿಂದ 1ಲಕ್ಷ ರೂ. ವೇತನ ಪಡೆಯುತ್ತಿದ್ದ ಪ್ರವೀಣ್ ಚೌಗುಲೆ, ಮೂರು ಲಕ್ಷ ರೂ. ಮುಂಗಡ ನೀಡಿ ಕಾರು ಮತ್ತು ಮಂಗಳೂರಿನಲ್ಲಿ 10 ಸೆಂಟ್ಸ್ ಜಾಗವನ್ನು ಕೂಡ ಖರೀದಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News