ಕುಂದಾಪುರ: ಸಹಕಾರಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಶಾಸಕರ ಸಭೆ
ಕುಂದಾಪುರ: ಸಹಕಾರಿ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ಹಾಗೂ ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುವ ವ್ಯವಸ್ಥೆ ಸ್ಥಗಿತವಾಗಿದ್ದು, ಬಾಕಿ ಇರುವ ಹಣವನ್ನು ಆದಷ್ಟು ಶೀಘ್ರದಲ್ಲಿ ದೊರಕಿಸಿಕೊಡವಂತೆ ಸಚಿವರ ಜತೆ ಮಾತುಕತೆ ನಡೆಸಲು, ಸಹಕಾರಿ ಪ್ರಮುಖರನ್ನು ಒಳಗೊಂಡಿರುವ ನಿಯೋಗವನ್ನು ಕರೆದೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಕುಂದಾಪುರದ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಶುಕ್ರವಾರ ಕುಂದಾಪುರ, ಉಡುಪಿ, ಹೆಬ್ರಿ, ಬ್ರಹ್ಮಾವರ ಹಾಗೂ ಬೈಂದೂರು ತಾಲೂಕಿನ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಶೂನ್ಯ ಬಡ್ಡಿ ದರದ ಕೃಷಿ ಸಾಲದ ಮಿತಿಯನ್ನು 3ರಿಂದ 5 ಲಕ್ಷಗಳಿಗೆ ಹಾಗೂ ಶೇ.3ರ ಬಡ್ಡಿದರದಲ್ಲಿ ನೀಡುವ ಕೃಷಿ ಅಭಿವೃದ್ಧಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷಕ್ಕೆ ಏರಿಸಿದ್ದರೂ, ರೈತರಿಗೆ ಕ್ಲಪ್ತ ಸಮಯಕ್ಕೆ ಸಾಲ ದೊರಕುತ್ತಿಲ್ಲ. ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, ರೈತರಿಂದ ಅರ್ಜಿಯೇ ಬಂದಿಲ್ಲ ಎಂದು ಉತ್ತರಿಸಿದ್ದಾರೆ ಎಂದರು.
ಈ ಕಾರಣಕ್ಕಾಗಿ ಇಲ್ಲಿನ ಸರಿಯಾದ ಮಾಹಿತಿ ತಿಳಿದುಕೊಳ್ಳಲು ಈ ಸಭೆ ಆಯೋಜಿಸಲಾಗಿದೆ. ಸಹಕಾರಿ ಪ್ರತಿನಿಧಿಗಳಿಂದ ಪಡೆದುಕೊಳ್ಳಲಾಗಿರುವ ಮಾಹಿತಿಗೆ ಪೂರಕವಾಗಿ ಶೀಘ್ರವೇ ಬಾಕಿ ಹಣ ಬಿಡುಗಡೆ ಮಾಡಲು ಇಲಾಖಾ ಸಚಿವರು ಹಾಗೂ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ವ್ಯಕ್ತಪಡಿಸಿದರು.
ಸಾಲಮನ್ನಾ ಮಾಹಿತಿ ತುಂಬುವ ತಂತ್ರಾಂಶ ನಿರ್ವಹಿಸುವ ಸಂಸ್ಥೆಗೆ ಸರಕಾರದಿಂದ ವಾರ್ಷಿಕ ನಿರ್ವಹಣ ಶುಲ್ಕ ನೀಡದ ಕಾರಣ ತಂತ್ರಾಂಶ ಸ್ಥಗಿತಗೊಂಡಿದ್ದು, ನಂತರ ಬಂದ ಅಧಿಕಾರಿಗಳು ಹಿಂದಿನ ಬಿಲ್ಲುಗಳಿಗೆ ಮಂಜೂರಾತಿ ನೀಡುತ್ತಿಲ್ಲ. ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಮೂಲಕ ಸಾಲ ದೊರೆಯುತ್ತಿಲ್ಲ. ಸ್ವಂತ ಬಂಡವಾಳದಿಂದ ನೀಡಲು ಸೊಸೈಟಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸೊಸೈಟಿಗಳು ಸ್ವಂತ ಬಂಡವಾಳದಿಂದ ನಿಬ್ಬಡ್ಡಿ ಸಾಲ ನೀಡಿದರೆ, ಅದೇ ಹಣವನ್ನು ರೈತರು ಅದೇ ಸೊಸೈಟಿಯಲ್ಲಿಯೇ ಶೇ.9.5ರ ಬಡ್ಡಿ ದರದಲ್ಲಿ ನಿರಖು ಠೇವಣಿ ಇಡುವ ಪ್ರಸಂಗಗಳು ಇದೆ ಎಂದರು.
ಸಾಲ ಹಾಗೂ ಬಡ್ಡಿ ಮನ್ನಾ ಬಾಬ್ತು 12 ವರ್ಷಗಳಿಂದ ಸರಕಾರದಿಂದ ಬರಬೇಕಾಗಿರುವ ಬಾಕಿ ಹಣ ಬಂದಿಲ್ಲ. ಕೆಲವು ಸೊಸೈಟಿಗಳಿಗೆ 1ರಿಂದ 4 ಕೋ. ರೂ.ವರೆಗೆ ಬಾಕಿ ಇದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಂದಾಜು 650 ಕೋ.ರೂ.ಗಳಷ್ಟು ಬಾಕಿ ಇದೆ. ಬಡ್ಡಿ ರಿಯಾಯಿತಿ ಸಂದರ್ಭದಲ್ಲಿ ಶೇ.9.8 ಬಡ್ಡಿ ನೀಡುವ ಭರವಸೆ ನೀಡಿದ್ದ ಸರಕಾರ, ಲೆಕ್ಕಾಚಾರ ಮನವಿ ಸಲ್ಲಿಸುವಾಗ ಶೇ.7.1 ಮಾತ್ರ ನೀಡುವುದಾಗಿ ಹೇಳಿದ್ದರಿಂದಾಗಿ ಇದರಲ್ಲಿಯೂ ಶೇ.2.7ರಷ್ಟು ನಷ್ಟವಾಗಿದೆ ಎಂಜು ಅವರು ವಿವರಿಸಿದರು.
ಸಭೆಯಲ್ಲಿ ಸರಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದ ಸಹಕಾರಿ ಸಂಘಗಳ ಉಪನಿಬಂಧಕ ಎಸ್.ವಿ.ಅರುಣ ಕುಮಾರ್, ಗೋದಾಮು ರಚನೆ ಮಾಡಲು ಕೇಂದ್ರ ಸರಕಾರದಿಂದ ಸಹಾಯಾನುದಾನ ದೊರಕುತ್ತದೆ. ಕೇಂದ್ರ ಸರ್ಕಾರದ ಕೆಲವು ಸಹಕಾರಿ ಸಂಸ್ಥೆಗಳಲ್ಲಿ ಪಾಲು ಬಂಡವಾಳ ಹಾಕಲು ಅವಕಾಶ ಇದೆ. ಎಲ್ಪಿಜಿ ವಿತರಣೆ, ಪೆಟ್ರೋಲ್ ಪಂಪ್ ಸ್ಥಾಪನೆ, ಜನೌಷಧಿ ಕೇಂದ್ರ ಆರಂಭಿಸಲು ಸಹಕಾರಿ ಸಂಸ್ಥೆಗಳಿಗೆ ಅವಕಾಶ ಇದೆ. ಪದವಿ ವಿದ್ಯಾರ್ಹತೆ ಇಲ್ಲದೆ ಇದ್ದರೂ, ಕನಿಷ್ಠ 15 ದಿನಗಳ ತರಬೇತಿಯೊಂದಿಗೆ ಪ್ರಮಾಣ ಪತ್ರ ಪಡೆದುಕೊಂಡವರಿಗೂ ರಸಗೊಬ್ಬರ ಮಾರಾಟಕ್ಕೆ ಅವಕಾಶವಿದ್ದು, ಈ ಪ್ರಮಾಣ ಪತ್ರದ ಆಧಾರದಲ್ಲಿ ಸೊಸೈಟಿಗಳಲ್ಲಿ ರಸಗೊಬ್ಬರ ಮಾರಾಟ ಕೇಂದ್ರ ಆರಂಭಿಸಲು ಸರ್ಕಾರ ಅವಕಾಶ ನೀಡಿದೆ ಎಂದು ಅರುಣ್ ತಿಳಿಸಿದರು.
ಎಸ್ಸಿಡಿಸಿಸಿ ಬ್ಯಾಂಕ್ ನಿರೀಕ್ಷಣಾ ವಿಭಾಗದ ಸಹಾಯಕ ಮಹಾಪ್ರಬಂಧಕ ಮೋಹನ್‌ದಾಸ್, ಉಪ ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ಉಪಸ್ಥಿತರಿದ್ದರು.