ಉಡುಪಿ: ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ; ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ 2202 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಕೆ

Update: 2024-02-12 15:01 GMT

ಉಡುಪಿ, ಫೆ.12: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮತ್ತು ಚಾರ್ಜ್ ಶೀಟ್ ಸಲ್ಲಿಸಲು ಫೆ.12 ಕೊನೆಯ ದಿನವಾಗಿರುವುದರಿಂದ ಪ್ರಕರಣದ ತನಿಖಾಧಿಕಾರಿಯಾಗಿರುವ ಮಲ್ಪೆ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ದೋಷಾ ರೋಪಣಾ ಪಟ್ಟಿಯನ್ನು ಶನಿವಾರ ನ್ಯಾಯಾಧೀಶೆ ದೀಪಾ ಅವರ ವಸತಿ ಕಚೇರಿಯಲ್ಲಿ ಸಲ್ಲಿಸಿದರು.

15 ಸಂಪುಟ 2202 ಪುಟಗಳು

ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ವಿರುದ್ಧ ಒಟ್ಟು 15 ಸಂಪುಟಗಳಲ್ಲಿ 2202 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತನಿಖಾಧಿ ಕಾರಿಗಳು ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತಾಂತ್ರಿಕ ಸಾಕ್ಷ್ಯ, ವಿಶೇಷ ತಜ್ಞರ ಸಾಕ್ಷ್ಯ, ಜನರು ನೀಡಿದ ಹೇಳಿಕೆಯ ಸಾಕ್ಷ್ಯ ಸೇರಿದಂತೆ ಒಟ್ಟು 244 ಸಾಕ್ಷ್ಯಗಳನ್ನು ಸಂಗ್ರಹಿಸ ಲಾಗಿದೆ. ಇದರಲ್ಲಿ ಹಲವು ಮಂದಿ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಎಲ್ಲ ರೀತಿಯ ಸಾಕ್ಷ್ಯಗಳು ಹಾಗೂ ಎಫ್‌ಎಸ್‌ಎಲ್ ವರದಿಗಳು ಪೊಲೀಸರ ಕೈಸೇರಿರುವುದರಿಂದ ಒಂದೇ ಹಂತದಲ್ಲಿ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ.

ಫೆ.15ಕ್ಕೆ ಮುಂದೂಡಿಕೆ

ದೋಷಾರೋಪಣಾ ಪಟ್ಟಿಯನ್ನು ಸ್ವೀಕರಿಸಿದ ನ್ಯಾಯಾಧೀಶರು ಸೋಮವಾರ ನ್ಯಾಯಾಲಯದಲ್ಲಿ ಈ ಕುರಿತ ದಾಖಲೆ ಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಈ ಸಂಬಂಧ 188/24 ನ್ಯಾಯಾಲಯದ ಪ್ರಕರಣ ಸಂಖ್ಯೆಯನ್ನು ನೀಡ ಲಾಗಿದ್ದು, ದೋಷಾರೋಪಣಾ ಪಟ್ಟಿಯ ಮುಂದಿನ ಪರಿಶೀಲನೆಯನ್ನು ಫೆ.15ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶ ನೀಡಿದರು. ಈ ಸಂದರ್ಭದಲ್ಲಿ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್ ಆಳ್ವ ಹಾಗೂ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ. ನದಾಫ್ ಹಾಜರಿದ್ದರು.

ಕೊಲೆ ಪ್ರಕರಣದ ಹಿನ್ನೆಲೆ

ನೇಜಾರು ತೃಪ್ತಿ ಲೇಔಟ್‌ನ ನೂರು ಮುಹಮ್ಮದ್ ಎಂಬವರ ಪತ್ನಿ ಹಸೀನಾ (48) ಹಾಗೂ ಅವರ ಪುತ್ರಿಯರಾದ ಅಫ್ನಾನ್(23) ಮತ್ತು ಅಯ್ನಾಝ್ (21) ಹಾಗೂ ಪುತ್ರ ಆಸೀಮ್(13) ಎಂಬವರನ್ನು ಮಂಗಳೂರಿನ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಉದ್ಯೋಗಿಯಾಗಿದ್ದ ಪ್ರವೀಣ್ ಚೌಗುಳೆ 2023ರ ನ.12ರಂದು ಹಾಡುಹಗಲೇ ಮನೆಗೆ ನುಗ್ಗಿ ಚೂರಿಯಿಂದ ಇರಿದು ಬರ್ಬರ ವಾಗಿ ಹತ್ಯೆಗೈದು ಪರಾರಿಯಾಗಿದ್ದನು. ಹಸೀನಾ ಅವರ ಅತ್ತೆ ಹಾಜಿರಾ(70) ಚೂರಿ ಇರಿತದಿಂದ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿ ಎಂಟು ತಂಡಗಳನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿತ್ತು. ನ.14ರಂದು ಆರೋಪಿಯನ್ನು ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

‘ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷಿ, ಸಾಕ್ಷ್ಯಗಳು ಮತ್ತು ಎಫ್‌ಎಸ್‌ಎಲ್ ವರದಿಗಳನ್ನು ಕ್ರೋಡೀಕರಣಸಿ ತನಿಖಾಧಿಕಾರಿ ಗಳು ವಿಶೇಷ ಸರಕಾರಿ ಅಭಿಯೋಜಕರ ಸಲಹೆ ಪಡೆದುಕೊಂಡು ನ್ಯಾಯಾಲಯಕ್ಕೆ ದೋಷಾ ರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ. ಆದಷ್ಟು ಬೇಗ ಪ್ರಕರಣದ ವಿಚಾರಣೆ ಆರಂಭಿಸುವಂತೆ ಪೊಲೀಸ್ ಇಲಾಖೆಯಿದಲೂ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ’

-ಡಾ.ಕೆ.ಅರುಣ್, ಉಡುಪಿ ಎಸ್ಪಿ

‘ಫೆ.15ರಂದು ದೋಷಾರೋಪಣಾ ಪಟ್ಟಿಯ ದಾಖಲೆಗಳ ಪರಿಶೀಲನೆಯನ್ನು ಅಂತಿಮಗೊಳಿಸಿ ಆರೋಪಿ ಪರ ವಕೀಲರಿಗೆ ಅದರ ಪ್ರತಿಯನ್ನು ನೀಡ ಲಾಗುತ್ತದೆ. ಅಲ್ಲದೆ ವಿಚಾರಣೆಗಾಗಿ ಪ್ರಕರಣವನ್ನು ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಆ ದಿನವೂ ಆರೋಪಿಯನ್ನು ಆನ್‌ಲೈನ್ ಮೂಲಕ ಕೋರ್ಟ್ ಹಾಜರುಪಡಿಸಲಾಗುತ್ತದೆ’

-ಶಿವಪ್ರಸಾದ್ ಆಳ್ವ, ವಿಶೇಷ ಸರಕಾರಿ ಅಭಿಯೋಜಕರು

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News