ಸೈಬರ್ ಕ್ರೈಮ್ ತಡೆಗೆ ತಾಂತ್ರಿಕ ತರಬೇತಿ, ಸಂಪನ್ಮೂಲ ನೀಡಲು ಬದ್ಧ: ಪ್ರೊ. ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಭರವಸೆ

Update: 2024-04-02 15:51 GMT

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಹಾಗೂ ಸೈಬರ್ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಸಹಾಯಕವಾಗುವಂತೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ಉಡುಪಿಯ ಸೆನ್ (ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಮ್ ಪೊಲೀಸ್) ಪೊಲೀಸ್ ಠಾಣೆಗೆ 10 ಹೈಟೆಕ್ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಕೊಡುಗೆಯಾಗಿ ನೀಡಿದೆ.

ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಹಾಗೂ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಮಣಿಪಾಲದ ಮಾಹೆಯಲ್ಲಿ ನಡೆದ ಸಮಾರ್‌ಭದಲ್ಲಿ ಉಡುಪಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ ಅವರಿಗೆ ಮಾಹೆಯಿಂದ ಕೊಡುಗೆ ಯಾಗಿ ನೀಡಿದ 10 ಹೈಟೆಕ್ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ಮಾಹೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸೆನ್ ಪೊಲೀಸ್ ಅಧಿಕಾರಿಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಬೆದರಿಕೆಯನ್ನು ಎದುರಿಸುವ ಕಾರ್ಯ ತಂತ್ರವನ್ನು ರೂಪಿಸಲು ಈ ಹೈಟೆಕ್ ಕಂಪ್ಯೂಟರ್ ಸಿಸ್ಟಮ್ ಸಹಾಯ ಮಾಡಲಿದೆ. ಇಂದಿನ ಡಿಜಿಟಲ್ ಸಮಾಜ ಎದುರಿ ಸುತ್ತಿರುವ ಸೈಬರ್ ಬೆದರಿಕೆಗಳ ನಿರ್ಣಾಯಕ ಸ್ವರೂಪವನ್ನು ಅರ್ಥಮಾಡಿಕೊಂಡು ಸೈಬರ್ ಭದ್ರತಾ ಕಾನೂನಿನ ಜಾರಿ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಹಾಯಕವಾಗಲಿದೆ ಎಂದು ಮಾಹೆ ಕುಲಪತಿ ಡಾ.ವೆಂಕಟೇಶ್ ತಿಳಿಸಿದರು.

ಮಾಹೆಯ ಕೊಡುಗೆಯು ಸೈಬರ್ ಅಪರಾಧವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಅಗತ್ಯವಾದ ತಾಂತ್ರಿಕ ಸಾಧನ ಗಳೊಂದಿಗೆ ಸೈಬರ್ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಮ್ ಪೊಲೀಸ್ ಠಾಣೆಯನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ ಎಂದವರು ಹೇಳಿದರು.

ಇದರಲ್ಲಿ ಇತ್ತೀಚಿನ ಸೈಬರ್ ಸೆಕ್ಯುರಿಟಿ ಸಾಪ್ಟ್‌ವೇರ್‌ಗಳೊಂದಿಗೆ ಸುಸಜ್ಜಿತವಾದ ಅತ್ಯಾಧುನಿಕ ಕಂಪ್ಯೂಟರ್ ಸಿಸ್ಟಮ್‌ಗಳ ಸಾಧನವು ಡಿಜಿಟಲ್ ಅಪರಾಧಗಳನ್ನು ತನಿಖೆ ಮಾಡಲು, ಪುರಾವೆಗಳನ್ನು ವಿಶ್ಲೇಷಿಸಲು ಹಾಗೂ ಸೈಬರ್ ಅಪರಾಧಿ ಗಳನ್ನು ಬಂಧಿಸುವ ಪೊಲೀಸರ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಇದು ಮಾಹೆಯ ಉದ್ದೇಶವೂ ಆಗಿದೆ ಎಂದು ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದರು.

ಸೈಬರ್ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಹಾಗೂ ಸೈಬರ್ ಅಪರಾಧವನ್ನು ಎದುರಿಸಲು ಸಹಾಯ ಮಾಡಲು ಅಗತ್ಯ ವಿರುವ ಸುಧಾರಿತ ತಾಂತ್ರಿಕ ಸಂಪನ್ಮೂಲ ಹಾಗೂ ತರಬೇತಿಯನ್ನು ನೀಡಲು ಸಹ ನಾವು ಬದ್ಧರಿದ್ದೇವೆ ಎಂದು ಡಾ.ಬಲ್ಲಾಳ್ ಇಲಾಖೆಗೆ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News