ಕರಾವಳಿ, ಮಲೆನಾಡು, ಬಯಲುಸೀಮೆಯ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ: ಕೆ.ಜಯಪ್ರಕಾಶ್ ಹೆಗ್ಡೆ

Update: 2024-04-03 14:50 GMT

ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ಜನಬೆಂಬಲದೊಂದಿಗೆ ಆಯ್ಕೆಯಾದರೆ ಕರಾವಳಿ, ಮಲೆ ನಾಡು ಹಾಗೂ ಬಯಲುಸೀಮೆಯನ್ನೊಳಗೊಂಡ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಪ್ರಥಮ ಆದ್ಯತೆಯನ್ನು ನೀಡುವು ದಾಗಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಘೋಷಿಸಿದ್ದಾರೆ.

ಬುಧವಾರ ಬೆಳಗ್ಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಲು ತೆರಳುವುದಕ್ಕೆ ಮುನ್ನ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ್ದ ಹಿರಿಯ ನಾಯಕರು, ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿ ಅವರು ಮಾತನಾಡುತಿದ್ದರು.

2012ರಲ್ಲಿ 20 ತಿಂಗಳ ಅವಧಿಗೆ ಸಂಸತ್ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದಾಗ ಹಲವು ಯೋಜನೆಗಳಿಗೆ ಮಂಜೂರಾತಿ ದೊರಕಿಸಿಕೊಟ್ಟಿದೆ. ಹತ್ತು ವರ್ಷಗಳು ಕಳೆದರೂ ಕ್ಷೇತ್ರದಲ್ಲಿ ಹಾದುಹೋಗುವ ಹಲವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗಳು ಇನ್ನೂ ನಡೆದಿಲ್ಲ. ಅವುಗಳಿಗೆ ಮರು ಚಾಲನೆ ನೀಡುವ ಕೆಲಸ ಮಾಡುವುದಾಗಿ ಹೇಳಿದರು.

ಕರಾವಳಿಯಲ್ಲಿ ಮೀನುಗಾರರ ಹಲವು ಸಮಸ್ಯೆಗಳಿಗೆ ಸ್ಪಂಧನೆ, ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಗೆ ವಿಶೇಷ ಪ್ರಯತ್ನ, ಮಲೆನಾಡಿನಲ್ಲಿ ಅಡಿಕೆ ಧಾರಣೆಯನ್ನು ಹೆಚ್ಚಿಸಲು, ಕಾಪಿ ಬೆಳೆಗಾರರ ಸಮಸ್ಯೆಗಳನ್ನು ಪರಿಹಾರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪಕ್ಷದ ಕಾರ್ಯಕರ್ತರು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮನೆಮನೆಯಲ್ಲಿ ಪ್ರಚಾರಗೊಳಿಸಬೇಕಿದೆ. ಹಸಿದ ಹೊಟ್ಟೆಗೆ ಅನ್ನ ನೀಡುವ ಈ ಕಾರ್ಯಕ್ರಮ ರಾಜ್ಯದ ಆರ್ಥಿಕ ಬಲವರ್ಧನೆಗೂ ಸಹಕಾರಿ ಎಂಬುದನ್ನು ಜನರಿಗೆ ತಿಳಿಸಿ ಹೇಳಬೇಕಿದೆ ಎಂದರು.

ಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ ಜಯಪ್ರಕಾಶ್ ಹೆಗ್ಡೆ ಅವರ ಸ್ಪರ್ಧೆಯಿಂದ ಉಭಯ ಜಿಲ್ಲೆಗಳ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ವೃದ್ಧಿಸಿದೆ. ಉಡುಪಿ ಹಾಗೂ ಕರಾವಳಿ ಭಾಗದಲ್ಲಿ ಜನ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಎಲ್ಲಾ ಜಾತಿ, ಧರ್ಮ ಹಾಗೂ ವರ್ಗದ ಜನ ಕಾಂಗ್ರೆಸ್ ಪಕ್ಷದ ಜೊತೆಗಿದ್ದಾರೆ ಎಂದರು.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಬಿಜೆಪಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಗ್ಯಾರಂಟಿ ಎಂದು ಲೇವಡಿ ಮಾಡುತಿದ್ದು, ಈ ಯೋಜನೆ ಬಿಜೆಪಿಯನ್ನು ಸುಟ್ಟುಹಾಕುವ ಕೆಲಸ ಮಾಡಲಿದೆ ಎಂದು ಭವಿಷ್ಯ ನುಡಿದರು. ಈ ಯೋಜನೆಗಳಿಂದ ಬಡ ಕುಟುಂಬ ಪ್ರತಿತಿಂಗಳು 4ರಿಂದ 5ಸಾವಿರ ರೂ. ಹಣ ಗಳಿಸುತಿದ್ದು, ಬಡತನ ನಿರ್ಮೂಲಕ್ಕೆ ಇದು ಸಹಕಾರಿ ಎಂದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಜಯಪ್ರಕಾಶ್ ಹೆಗ್ಡೆ ಅವರ ಗೆಲವಿಗೆ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲುವಿನ ಮೂಲಕ ಹೊಸ ಇತಿಹಾಸ ನಿರ್ಮಿಸಬೇಕು ಎಂದು ಕರೆ ನೀಡಿದರು. ಚಿಕ್ಕಮಗಳೂರಿನ ಮಾಜಿ ಸಚಿವ ಮೋಟಮ್ಮ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನ ಮೊಟಮ್ಮ, ಶೃಂಗೇರಿ ಶಾಸಕ ರಾಜೇಗೌಡ, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸುಧೀರ್‌ಕುಮಾರ್ ಮುರೊಳ್ಳಿ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಚಿಕಕಮಗಳೂರಿನ ಗಾಯತ್ರಿ ಶಾಂತೇಗೌಡ, ಎಂ.ಎ. ಗಫೂರ್, ಸಬನಾ ಸುಲ್ತಾನಾ, ಶಿವಾನಂದ ಸ್ವಾಮಿ, ಬಿ.ಎಚ್.ಹರೀಶ್, ಬೈಂದೂರಿನ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ಉದಯ ಶೆಟ್ಟಿ ಮುನಿಯಾಲು, ದಿನೇಶ್ ಹೆಗ್ಡೆ ಮೊಳಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News