ಈ ಬಾರಿ ಶೇಕಡವಾರು ಮತದಾನ ಹೆಚ್ಚುವಂತೆ ನೋಡಿಕೊಳ್ಳಿ: ರಾಜ್ಯ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್

Update: 2024-04-03 16:21 GMT

ಉಡುಪಿ: 2024ರ ಲೋಕಸಭಾ ಚುನಾವಣೆಯಲ್ಲಿ ಕಳೆದ ಲೋಕಸಭಾ ಚುನಾವಣೆಗಿಂತ ಶೇಕಡವಾರು ಹೆಚ್ಚಿನ ಮತದಾನವಾಗುವಂತೆ ಪ್ರೋತ್ಸಾಹಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರಾಜ್ಯ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ತಿಳಿಸಿದ್ದಾರೆ.

ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲೆಯ ಸ್ವೀಪ್ ಚಟುವಟಿಕೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

2019ರ ಲೋಕಸಭಾ ಚುನಾವಣೆಗಿಂತ ಶೇಕಡವಾರು ಮತದಾನ ಹೆಚ್ಚಿಸಲು ಹಲವಾರು ಸ್ವೀಪ್ ಚಟುವಟಿಕೆಗಳನ್ನು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ವಿಶೇಷ ಕಾಳಜಿ ವಹಿಸಬೇಕು. ಕಡಿಮೆ ಮತದಾನವಾದ ಕೇಂದ್ರ ಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಹೆಚ್ಚೆಚ್ಚು ಹಮ್ಮಿ ಕೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪಾರದರ್ಶಕ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯ ಮಾಹಿತಿ, ಸಹಾಯವಾಣಿ ಹಾಗೂ ಕುಂದುಕೊರತೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚುನಾವಣಾ ಆ್ಯಪ್‌ಗಳಾದ ವಿಹೆಚ್‌ಎ, ಸಕ್ಷಮ್, ಸುವಿಧಾ, ಸಿ-ವಿಜಿಲ್ ಮತ್ತು 1950 ಸಹಾಯವಾಣಿ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ವಿಶೇಷವಾಗಿ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಅವರಿಗೆ ಮತದಾರರ ಸಾಕ್ಷರತೆಯ ಅರಿವು ಮೂಡಿಸು ವುದರ ಜೊತೆಗೆ ಮತದಾನ ಮಾಡಲು ಉತ್ತೇಜಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಖೀ ಮತಗಟ್ಟೆಗಳು ಹೆಚ್ಚು ಆಕರ್ಷಣೀಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು.

ಮತದಾನ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕುರಿತು ವಿಶೇಷ ಗಮನ ಹರಿಸಿ ಸಾರ್ವಜನಿಕರಿಗೆ, ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ಮತದಾನ ಮಾಡಲು ಅನುಕೂಲ ವಾಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದ ಅವರು, ಶ್ರವಣ ದೋಷವುಳ್ಳವರಿಗೆ ವಿಶೇಷ ಸಂಜ್ಞೆ ತಜ್ಞರ ಮೂಲಕ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಚುನಾವಣಾ ಜಾಗೃತಿ ಸ್ವೀಪ್ ಚಟುವಟಿಕೆಗಳು ಹಾಗೂ ಕಡಿಮೆ ಮತದಾನ ನಡೆದ ಕೇಂದ್ರಗಳಲ್ಲಿ ಶೇಕಡವಾರು ಮತದಾನ ಹೆಚ್ಚಿಸಲು ಕೈಗೊಂಡ ಕ್ರಮಗಳ ಕುರಿತು ಸಭೆಗೆ ವಿವರವಾದ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಡಯಟ್ ಪ್ರಾಂಶುಪಾಲ ಗೋವಿಂದ ಮಡಿವಾಳ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News