ಎರಡು ಹಂತದಲ್ಲಿ ಮತದಾನ ನಡೆಯುವ ರಾಜ್ಯದ ಏಕೈಕ ಜಿಲ್ಲೆ ಉಡುಪಿ!
ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆ ಇಡೀ ರಾಜ್ಯದಲ್ಲೇ ವಿಶೇಷ ಜಿಲ್ಲೆಯಾಗಿ ಮೂಡಿ ಬಂದಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲೂ ನಡೆಯದ ಎರಡು ಹಂತದ ಚುನಾವಣೆ ಈ ಬಾರಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವುದೇ ಈ ವಿಶೇಷ.
ಚುನಾವಣಾ ಆಯೋಗ ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ. ಮೊದಲನೆ ಹಂತದ ಮತದಾನ ಎ.26ರಂದು ನಡೆದರೆ, ಎರಡನೆ ಹಂತದಲ್ಲಿ ಮೇ 7ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆದರೆ, ಎರಡನೆ ಹಂತದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.
2008ರ ಕ್ಷೇತ್ರ ಪುನರ್‌ವಿಂಗಡೆಯ ಬಳಿಕ ಉಡುಪಿ ಜಿಲ್ಲಾ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆ ಯಾಗಿರುವುದರಿಂದ ಉಡುಪಿ ಜಿಲ್ಲೆ, ಈ ಬಾರಿಯ ಎರಡೂ ಹಂತದ ಮತ ದಾನವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಮೊದಲ ಹಂತ ಮಾತ್ರವಲ್ಲದೆ ಮೇ 7ರ ಎರಡನೆ ಹಂತದ ಮತದಾನ ದವರೆಗೂ ಕಾರ್ಯನಿರ್ವಹಿಸಬೇಕಾಗುತ್ತದೆ.
ರಾಜ್ಯದ ಇತರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದ್ದರೂ ಎರಡು ಹಂತದ ಮತದಾನ ನಡೆಯುತ್ತಿರು ವುದು ಇಲ್ಲಿ ಮಾತ್ರ ಎಂಬುದು ವಿಶೇಷ. ಇದರಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಗೆ ಕಾರ್ಯವ್ಯಾಪ್ತಿಯ ಬಗ್ಗೆ ಸಮಸ್ಯೆಗಳು ಹಾಗೂ ಗೊಂದಲಗಳು ಉಂಟಾಗಿದ್ದರೂ ಅವುಗಳನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2014ರ ಲೋಕಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆದಿದ್ದರೆ, 2019ರ ಚುನಾವಣೆ ಸಹ ಎರಡು ಹಂತದಲ್ಲಿ ನಡೆದಿತ್ತು.
ಕ್ಷೇತ್ರ ಶಿವಮೊಗ್ಗಕ್ಕೆ, ಜವಾಬ್ದಾರಿ ಉಡುಪಿಗೆ!
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಚುನಾವಣಾಧಿಕಾರಿಯಾಗಿದ್ದರೆ, ಬೈಂದೂರು ವಿಧಾನ ಕ್ಷೇತ್ರವನ್ನೊಳಗೊಂಡ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಚುನಾವಣಾಧಿಕಾರಿ ಯಾಗಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಮೇ 7ರ ಎರಡನೆ ಹಂತದಲ್ಲಿ ಮತದಾನ ನಡೆಯುವುದರಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಮೊದಲ ಹಂತದಲ್ಲೇ (ಎ.26) ಮತದಾನ ಮುಗಿದರೂ ಉಡುಪಿ ಜಿಲ್ಲಾಡಳಿತದ ಜವಾಬ್ದಾರಿ ಮಾತ್ರ ಎರಡನೇ ಹಂತದಲ್ಲೂ ಮುಂದುವರಿ ಯಲಿದೆ.
ಬೈಂದೂರು ಕ್ಷೇತ್ರಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಚುನಾವಣಾಧಿಕಾರಿ ಯಾಗಿದ್ದರೂ ಮತದಾನಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾತ್ರ ಉಡುಪಿ ಜಿಲ್ಲಾಡಳಿತವೇ ಮಾಡಬೇಕಾಗಿದೆ. ಮತಯಂತ್ರ, ಸಿಬ್ಬಂದಿಗಳು, ವಾಹನದ ವ್ಯವಸ್ಥೆ, ಪೊಲೀಸ್ ಭದ್ರತೆ ಸೇರಿದಂತೆ ಎಲ್ಲ ಕಾರ್ಯಗಳ ಜವಾಬ್ದಾರಿ ಉಡುಪಿ ಜಿಲ್ಲಾಡಳಿತದ್ದಾಗಿದೆ. ಚುನಾವಣಾ ಪ್ರಚಾರಕ್ಕೆ ಬೇಕಾದ ಅನುಮತಿ ಯನ್ನು ಬೈಂದೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಿಂದ ಪಡೆದುಕೊಂಡರೆ, ಹೆಲಿಕಾಪ್ಟರ್, ಸ್ಟಾರ್ ಪ್ರಚಾರಕರ ಪ್ರಚಾರಕ್ಕೆ ಉಡುಪಿ ಜಿಲ್ಲಾಡಳಿತವೇ ಅನುಮತಿ ಕೊಡಬೇಕಾಗುತ್ತದೆ.
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದರೆ ಅದರ ವರದಿ, ಉಡುಪಿ ಜಿಲ್ಲಾಡಳಿತದ ಮೂಲಕವೇ ಶಿವಮೊಗ್ಗ ಚುನಾವಣಾಧಿಕಾರಿಗೆ ಹೋಗಬೇಕಾಗುತ್ತದೆ. ಆದರೆ ಮಾಧ್ಯಮದಲ್ಲಿ ಆಗುವ ನೀತಿ ಸಂಹಿತೆ ಉಲ್ಲಂಘನೆಯು ನೇರವಾಗಿ ಶಿವಮೊಗ್ಗ ಚುನಾವಣಾಧಿಕಾರಿಯ ವ್ಯಾಪ್ತಿಗೆ ಬರುತ್ತದೆ.
ಅದೇ ರೀತಿ ಬೈಂದೂರು ಕ್ಷೇತ್ರದಲ್ಲಿ ಮತದಾನ ಪ್ರಮಾಣ ವೃದ್ಧಿಗಾಗಿ ಹಮ್ಮಿಕೊಳ್ಳಲಾಗಿರುವ ಸ್ವೀಪ್ ಕಾರ್ಯಕ್ರಮವನ್ನು ಕೂಡ ಉಡುಪಿ ಜಿಲ್ಲಾ ಸ್ವೀಪ್ ಸಮಿತಿಯೇ ನಡೆಸಬೇಕು. ಹೀಗಾಗಿ ಎ.26ರ ಮೊದಲ ಹಂತದ ಚುನಾವಣೆಯ ನಂತರವೂ ಬೈಂದೂರು ಕ್ಷೇತ್ರದಲ್ಲಿ ಸ್ವೀಪ್ ಕಾರ್ಯಕ್ರಮಗಳು ಮತದಾನಕ್ಕೆ ಮುನ್ನಾ ದಿನದವರೆಗೆ ಮುಂದುವರಿಯಲಿದೆ.
ಅದಲು ಬದಲಾದ ಕ್ಷೇತ್ರಗಳು
1956ರಲ್ಲಿ ಆರಂಭಗೊಂಡ ಉಡುಪಿ ಲೋಕಸಭಾ ಕ್ಷೇತ್ರದ (1952ರಲ್ಲಿ ನಡೆದ ಮೊದಲ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಎಂಬ ಕ್ಷೇತ್ರ ಇದ್ದಿರಲಿಲ್ಲ. ಆಗ ಅಂದಿನ ಮದರಾಸು ರಾಜ್ಯಕ್ಕೆ ಸೇರಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ (ಉತ್ತರ) ಹಾಗೂ ದಕ್ಷಿಣ ಕನ್ನಡ (ದಕ್ಷಿಣ) ಎಂದು ವಿಭಜಿಸಲಾಗಿತ್ತು.)ವ್ಯಾಪ್ತಿಯಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಮುಲ್ಕಿ- ಮೂಡಬಿದ್ರೆ, ಸುರತ್ಕಲ್, ಬಂಟ್ವಾಳ ವಿಧಾನಸಭಾ ಕ್ಷೇತ್ರಗಳಿದ್ದವು. ಆದರೆ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ಮಾತ್ರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು.
2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡನೆಯಿಂದ ಉಡುಪಿ- ಚಿಕ್ಕಮಗ ಳೂರು ಲೋಕಸಭಾ ಕ್ಷೇತ್ರವು ರಚನೆಗೊಂಡಿತು. ಇದರಿಂದ ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾದ ಕ್ಷೇತ್ರದ ಪಾಲಾಯಿತು. ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರವು ಮಾಯವಾಗಿ ಉಡುಪಿ ಮತ್ತು ಕುಂದಾಪುರ ಕ್ಷೇತ್ರಗಳಲ್ಲಿ ಹಂಚಿಹೋಯಿತು.
ಹೀಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾರ್ಕಳ, ಕಾಪು ಮತ್ತು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡುಗೆರೆ, ಚಿಕ್ಕಮಗಳೂರು, ತರೀಕೆರೆ ವಿಧಾನಸಭಾ ಕ್ಷೇತ್ರಗಳು ಸೇರ್ಪಡೆ ಗೊಂಡವು. ಇದರ ಪರಿಣಾಮ ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾದವು.
"ಎರಡು ಹಂತದ ಮತದಾನಗಳು ಇಡೀ ರಾಜ್ಯದಲ್ಲೇ ಉಡುಪಿ ಜಿಲ್ಲೆಯಲ್ಲಿ ಮಾತ್ರ ನಡೆಯುತ್ತಿವೆ. ಬೈಂದೂರು ಕ್ಷೇತ್ರದ ಚುನಾವಣಾಧಿಕಾರಿ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದರೂ ನಾನು ಡಿಓ ಆಗಿರುತ್ತೇನೆ. ಮತದಾನಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಉಡುಪಿ ಜಿಲ್ಲಾಡಳಿತವೇ ಮಾಡಬೇಕಾಗುತ್ತದೆ. ಮತಯಂತ್ರ, ಸಿಬ್ಬಂದಿ, ರಕ್ಷಣೆ ಮಾತ್ರವಲ್ಲದೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕೂಡ ನಮ್ಮ ವ್ಯಾಪ್ತಿಗೆ ಬರುತ್ತದೆ". -ಡಾ.ಕೆ.ವಿದ್ಯಾಕುಮಾರಿ, ಚುನಾವಣಾಧಿಕಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 72 ವಿಶೇಷ ಮತಗಟ್ಟೆಗಳು
ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 72 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಕ್ಷೇತ್ರದ ಉಡುಪಿ ಜಿಲ್ಲೆಯಲ್ಲಿ 4 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 4 ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರಗಳಲ್ಲೂ ವಿವಿಧ ರೀತಿಯ ತಲಾ 9 ಮತಗಟ್ಟೆಗಳನ್ನು ತೆರೆಯಲಾಗುತ್ತದೆ ಎಂದು ಚುನಾವಣಾಧಿಕಾರಿ ಯಾಗಿರುವ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು.
ಪ್ರತಿ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ ಐದು ಸಖಿ (ಪಿಂಕ್) ಮತಗಟ್ಟೆಗಳು, ಒಂದು ಯುವ ಮತದಾರರೇ ನಿರ್ವಾಹಕರಾಗಿರುವ ಯುವ ಮತಗಟ್ಟೆ, ವಿಕಲಚೇತನರು ನಿರ್ವಹಿಸುವ ಮತಗಟ್ಟೆ ಒಂದು, ಒಂದು ಬುಡಕಟ್ಟು ಜನಾಂಗ ದವರ ಎಥಿನಿಕ್ ಮತಗಟ್ಟೆ ಹಾಗೂ ಒಂದು ಥೀಮ್ ಆಧಾರಿತ ಮತಗಟ್ಟೆಗಳನ್ನು ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ತೆರೆಯ ಲಾಗುತ್ತದೆ. ಹೀಗೆ ಪ್ರತಿ ಕ್ಷೇತ್ರದಲ್ಲಿ ತಲಾ 9ರಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 72 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುತ್ತದೆ ಎಂದು ಡಾ.ವಿದ್ಯಾಕುಮಾರಿ ವಿವರಿಸಿದರು.