ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಇತಿಹಾಸದ ಮೇಲೊಂದು ಪಕ್ಷಿನೋಟ

Update: 2024-04-22 15:02 GMT

ಉಡುಪಿ: 2004ರವರೆಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾಗಿದ್ದ ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೀಯ ಕ್ಷೇತ್ರಗಳು, 2008ರಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಈ ಎರಡು ಜಿಲ್ಲೆಗಳ ತಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೆಂಬ ಹೊಸ ಕ್ಷೇತ್ರದ ಉದಯವಾಯಿತು. ಪಶ್ಚಿಮದ ಕರಾವಳಿ ಹಾಗೂ ಪಶ್ಚಿಮ ಘಟ್ಟದ ಮೇಲಿನ ಮಲೆನಾಡು ಸಮ್ಮಿಳಿತವಾಗಿ ಈ ಕ್ಷೇತ್ರದ ರಚನೆಯಾಯಿತು. ಹೀಗಾಗಿ ಇದು ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯನ್ನೊಳಗೊಂಡ ಸಮ್ಮಿಳಿತ ಕ್ಷೇತ್ರವಾಯಿತು.

ಈ ಮೂಲಕ ಉಡುಪಿ ಮೂರನೇ ಬಾರಿಗೆ ತನ್ನ ಕ್ಷೇತ್ರ ವ್ಯಾಪ್ತಿಯನ್ನು ಬದಲಾಯಿಸಿಕೊಂಡಿತು. 1952ರಲ್ಲಿ ನಡೆದ ದೇಶದ ಮೊತ್ತಮೊದಲ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಎಂಬ ಕ್ಷೇತ್ರವೇ ಇದ್ದಿರಲಿಲ್ಲ. ಆಗ ಅಂದಿನ ಮದರಾಸು ರಾಜ್ಯಕ್ಕೆ ಸೇರಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ (ಉತ್ತರ) ಹಾಗೂ ದಕ್ಷಿಣ ಕನ್ನಡ (ದಕ್ಷಿಣ) ಎಂದು ವಿಭಜಿಸಲಾಗಿತ್ತು.

ಉಡುಪಿ, ಬ್ರಹ್ಮಾವರ, ಕುಂದಾಪುರ, ಕಾರ್ಕಳ ಹಾಗೂ ಮುಲ್ಕಿ ವಿಧಾನಸಭಾ ಕ್ಷೇತ್ರಗಳು ಸೇರಿ ಅಂದು ದಕ್ಷಿಣ ಕನ್ನಡ (ಉತ್ತರ) ಕ್ಷೇತ್ರ ರಚನೆ ಯಾಗಿತ್ತು. 1952ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಇದರ ಸದಸ್ಯರಾಗಿ ಆಯ್ಕೆಯಾಗಿದ್ದರು. ದಕ್ಷಿಣ ಕನ್ನಡ (ದಕ್ಷಿಣ)ಕ್ಕೆ ಕಾಂಗ್ರೆಸ್‌ನ ಬಿ.ಶಿವರಾವ್ ಸದಸ್ಯರಾಗಿದ್ದರು.

1957ರ ಲೋಕಸಭಾ ಚುನಾವಣೆ ವೇಳೆ ಕರಾವಳಿ ಪ್ರದೇಶ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡು ಉಡುಪಿ ಎಂಬ ಲೋಕಸಭಾ ಕ್ಷೇತ್ರ ಉದಯವಾಯಿತು. 1957ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಉಳ್ಳಾಲ ಶ್ರೀನಿವಾಸ ಮಲ್ಯ ಅವರು ಪಿಎಸ್‌ಪಿಯ ಮೋಹನ್ ರಾವ್‌ರನ್ನು ಸೋಲಿಸಿ ಉಡುಪಿಯ ಮೊದಲ ಅಧಿಕೃತ ಸಂಸದರಾಗಿ ಆಯ್ಕೆಯಾದರಲ್ಲದೇ, 1962ರಲ್ಲಿ ನಡೆದ ಮುಂದಿನ ಚುನಾವಣೆಯಲ್ಲಿ ಮೋಹನ್‌ರಾವ್ ಅವರನ್ನೇ ಮತ್ತೆ ಸೋಲಿಸಿ ಸತತ ಮೂರು ಬಾರಿ ಉಡುಪಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾದರು.

1967ರ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿಯ ಜೆ.ಎಂ.ಲೋಬೊ ಪ್ರಭು ಅವರು ತನ್ನ ಕಾಂಗ್ರೆಸ್ ಎದುರಾಳಿ ಎಸ್.ಎಸ್. ಕೊಳ್ಕೆಬೈಲ್‌ರನ್ನು ಹಿಮ್ಮೆಟ್ಟಿಸಿದರೆ, 1971ರಲ್ಲಿ ಪಿ.ರಂಗನಾಥ್ ಶೆಣೈ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಮಡಿಲಿಗೆ ಹಾಕಿದರು. ಅವರು ಜೆ.ಎಂ.ಲೋಬೊ ಪ್ರಭು ಅವರನ್ನು ಹಿಮ್ಮೆಟ್ಟಿಸಿದರು. 1977ರಲ್ಲಿ ಕಾಂಗ್ರೆಸ್‌ನ ತೋನ್ಸೆ ಅನಂತ ಪೈ (ಟಿ.ಎ.ಪೈ) ಅವರು ಬಿಎಲ್‌ಡಿಯ ಡಾ.ವಿ.ಎಸ್.ಆಚಾರ್ಯರನ್ನು ಸೋಲಿಸುವಲ್ಲಿ ಯಶಸ್ವಿಯಾದರು.

1978ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನು ಮತ್ತೆ ಬದಲಿಸ ಲಾಯಿತು. ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ, ಬ್ರಹ್ಮಾವರ, ಬೈಂದೂರು ವಿಧಾನಸಭಾ ಕ್ಷೇತ್ರಗಳೊಂದಿಗೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುರತ್ಕಲ್ ಹಾಗೂ ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳು ಉಡುಪಿ ಲೋಕಸಭಾ ವ್ಯಾಪ್ತಿಗೆ ಸೇರಿಸಲಾಯಿತು. ಇದರ ನಂತರ ನಡೆದ ಐದು ಚುನಾವಣೆಗಳಲ್ಲಿ (1980, 1984, 1989, 1991, 1996) ಕಾಂಗ್ರೆಸ್ ಪಕ್ಷದ ಆಸ್ಕರ್ ಫೆರ್ನಾಂಡೀಸ್ ಸತತವಾಗಿ ಜಯಗಳಿಸಿದರು. ಈ ಚುನಾವಣೆಗಳಲ್ಲಿ ಅವರು ಕ್ರಮವಾಗಿ ಜನತಾ ಪಕ್ಷದ ಡಾ.ವಿ.ಎಸ್. ಆಚಾರ್ಯ, ಬಿಜೆಪಿಯ ಕೆ.ಎಸ್.ಹೆಗ್ಡೆ, ಜನತಾ ದಳದ ಎಂ.ಸಂಜೀವ, ಬಿಜೆಪಿಯ ರುಕ್ಮಯ್ಯ ಪೂಜಾರಿ ಹಾಗೂ ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ ಅವರನ್ನು ಸೋಲಿಸಿದ್ದರು.

ಆದರೆ 1998ರ ಚುನಾವಣೆಯಲ್ಲಿ ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ ಅವರು ಆಸ್ಕರ್ ಫೆರ್ನಾಂಡೀಸ್‌ರನ್ನು ಸೋಲಿಸುವ ಮೂಲಕ ಬಿಜೆಪಿಗೆ ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ಬಾಗಿಲು ತೆರೆದಿಟ್ಟರು. ಒಂದೇ ವರ್ಷದಲ್ಲಿ (1999) ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿನಯ ಕುಮಾರ್ ಸೊರಕೆ ಅವರು ಐ.ಎಂ.ಜಯರಾಮ ಶೆಟ್ಟಿ ಅವರನ್ನು ಸೋಲಿಸುವ ಸೋಲಿಸುವ ಮೂಲಕ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ನ ತೆಕ್ಕೆಗೆ ತಂದರು.

ಆದರೆ 2004ರ ಚುನಾವಣೆಯ ವೇಳೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ ಮನೋರಮಾ ಮಧ್ವರಾಜ್ ಅವರು ವಿನಯಕುಮಾರ್ ಸೊರಕೆ ಅವರನ್ನು ಹಿಮ್ಮೆಟ್ಟಿಸಿ ಕ್ಷೇತ್ರವನ್ನು ಮತ್ತೆ ಬಿಜೆಪಿಯ ಕೈಗೊಪ್ಪಿಸಿದರು. ಇದರ ನಂತರ 2009ರ ಚುನಾವಣೆ ವೇಳೆ ಉಡುಪಿ ಲೋಕಸಭಾ ಕ್ಷೇತ್ರ ತನ್ನ ಅಸ್ತಿತ್ವವನ್ನು ಕಳೆದುಕೊಂಡು ವ್ಯಾಪ್ತಿಯನ್ನು ಮತ್ತೊಮ್ಮೆ ಬದಲಾಯಿಸಿಕೊಂಡು 15.ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂಬ ಹೊಸ ಹೆಸರಿನೊಂದಿಗೆ ಗುರುತಿಸಿಕೊಂಡಿತು.

ಚಿಕ್ಕಮಗಳೂರು ಕ್ಷೇತ್ರದ ಇತಿಹಾಸ: ಇನ್ನೊಂದೆಡೆ ಚಿಕ್ಕಮಗಳೂರು ಸಹ ತನ್ನ ವ್ಯಾಪ್ತಿಯನ್ನು ಎರಡು ಬಾರಿ ಬದಲಾಯಿಸಿಕೊಂಡಿತ್ತು. 1952ರಲ್ಲಿ ಮೈಸೂರು ರಾಜ್ಯದಲ್ಲಿ ಹಾಸನ-ಚಿಕ್ಕಮಗಳೂರು ಎಂಬುದು ಈ ಕ್ಷೇತ್ರದ ಹೆಸರಾಗಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಸಿದ್ಧನಂಜಪ್ಪ ಎಂಬವರು ಲೋಕಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. 1957 ಹಾಗೂ 1962ರ ಚುನಾವಣೆಯಲ್ಲೂ ಅವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಆದರೆ 1967ರ ಲೋಕಸಭಾ ಚುನಾವಣಾ ವೇಳೆಗೆ ಇದನ್ನು ವಿಭಾಗಿಸಿ ಚಿಕ್ಕಮಗಳೂರು ಹಾಗೂ ಹಾಸನವನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರವಾಗಿ ಮಾಡಲಾಯಿತು. 1967ರ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ (ಪಿಎಸ್‌ಪಿ) ಎಂ.ಹುಚ್ಚೇಗೌಡರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೊದಲ ಸಂಸತ್ ಸದಸ್ಯರೆನಿಸಿದರು.

1971ರಲ್ಲಿ ಡಿ.ಬಿ.ಚಂದ್ರೇಗೌಡ ಕಾಂಗ್ರೆಸ್‌ನಿಂದ ಸಂಸತ್ ಸದಸ್ಯರಾದರೆ, 1977ರಲ್ಲಿ ಮತ್ತೊಮ್ಮೆ ಅವರೇ ಜಯಗಳಿಸಿದ್ದಲ್ಲದೇ 1978ರಲ್ಲಿ ತನ್ನ ಸ್ಥಾನವನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾಗಿ ತೆರವು ಮಾಡಿದರು. 1978ರಲ್ಲಿ ನಡೆದ ಪ್ರಸಿದ್ಧ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಐತಿಹಾಸಿಕ ಜಯ ಪಡೆದರು.

1980ರಲ್ಲಿ ಕಾಂಗ್ರೆಸ್‌ನ ಡಿ.ಎಂ.ಪುಟ್ಟೇಗೌಡ, 1984ರಲ್ಲಿ ಡಿ.ಕೆ. ತಾರಾದೇವಿ, 1989ರಲ್ಲಿ ಮತ್ತೆ ಡಿ.ಎಂ.ಪುಟ್ಟೇಗೌಡ, 1991ರಲ್ಲಿ ಮತ್ತೆ ಡಿ.ಕೆ.ತಾರಾದೇವಿ ಜಯ ಪಡೆದರೆ, 1996ರಲ್ಲಿ ಬಿ.ಎಲ್.ಶಂಕರ್ ಅವರ ಮೂಲಕ ಜನತಾದಳ ಇಲ್ಲಿ ಜಯ ದಾಖಲಿಸಿತು. 1998ರ ಬಳಿಕ ಕ್ಷೇತ್ರ ಬಿಜೆಪಿ ಕೈವಶವಾಯಿತು. ಡಿ.ಸಿ.ಶ್ರೀಕಂಠಪ್ಪ ಅವರ ಮೂಲಕ ಬಿಜೆಪಿ ಇಲ್ಲಿ 1998, 1999, 2004ರಲ್ಲಿ ಜಯಭೇರಿ ಬಾರಿಸಿತು. 2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಕ್ಷೇತ್ರ ತನ್ನ ಅಸ್ತಿತ್ವ ಕಳೆದುಕೊಂಡು ಉಡುಪಿಯೊಂದಿಗೆ ಸೇರಿಕೊಂಡಿತು.

2008ರಲ್ಲಿ ನಡೆದ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ವಿಧಾನಸಭಾ ಕ್ಷೇತ್ರವೇ ಅಳಿದು ಹೋಯಿತು. ಮತ್ತೊಂದೆಡೆ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದೊಂದಿಗೆ ಸೇರಿಕೊಂಡಿತು. ಹಾಗೆಯೇ ಚಿಕ್ಕಮಗಳೂರಿನ ಕಡೂರು ಕ್ಷೇತ್ರ ವನ್ನು ಹಾಸನದೊಂದಿಗೆ ಸೇರ್ಪಡೆಗೊಳಿಸಲಾಯಿತು.

ಅಂತಿಮವಾಗಿ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿಕೊಂಡು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಇದರಲ್ಲಿ ಉಡುಪಿ, ಕಾಪು, ಕುಂದಾಪುರ, ಕಾರ್ಕಳ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಹಾಗೂ ತರಿಕೆರೆ ವಿಧಾನಸಭಾ ಕ್ಷೇತ್ರಗಳು ಸೇರಿವೆ.

ಕ್ಷೇತ್ರ ಪುನರ್ ವಿಂಗಡಣೆ ಬಳಿಕ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡ ಅವರು ಕಾಂಗ್ರೆಸ್‌ನ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದರು. ಆದರೆ 2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ‌ ಯಾದ ಡಿ.ವಿ.ಸದಾನಂದ ಗೌಡ ಲೋಕಸಭಾ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ ನಡೆದ ಉಪಚುನಾವಣೆಯಲ್ಲಿ ಕೆ.ಜಯಪ್ರಕಾಶ್ ಹೆಗ್ಡೆ, ಬಿಜೆಪಿಯ ವಿ.ಸುನಿಲ್‌ಕುಮಾರ್‌ರನ್ನು ಸೋಲಿಸಿದರು.

2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಿದ ಶೋಭಾ ಕರಂದ್ಲಾಜೆ ಅವರು ಮತ್ತೆ ಜಯಪ್ರಕಾಶ್ ಹೆಗ್ಡೆ ಅವರನ್ನು ಸೋಲಿಸಿದರು. 2019ರಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ವತಿಯಿಂದ ಸ್ಪರ್ಧಿಸಿದ ಶೋಭಾ ಕರಂದ್ಲಾಜೆ ಈ ಬಾರಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿದ್ದ ಪ್ರಮೋದ ಮಧ್ವರಾಜ್‌ರನ್ನು ಮೂರೂವರೆ ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

ಚುನಾವಣೆಗಳ ಫಲಿತಾಂಶ:

2009ರ ಲೋಕಸಭಾ ಚುನಾವಣೆ

ಡಿ.ವಿ.ಸದಾನಂದ (ಬಿಜೆಪಿ)- 4,01,441(ಶೇ.48.09)

ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)- 3,74,423(ಶೇ.44.86)

ರಾಧಾ ಸುಂದರೇಶ್ (ಸಿಪಿಐ)- 24,991(ಶೇ.2.99)

ಒಟ್ಟು ಮತದಾನವಾದ ಮತ- 8,34,728(ಶೇ.68.18)

ಗೆಲುವಿನ ಅಂತರ- 27,018 (ಶೇ.3.23)

2012ರ ಲೋಕಸಭಾ ಉಪಚುನಾವಣೆ

ಕೆ.ಜಯಪ್ರಕಾಶ್ ಹೆಗ್ಡೆ(ಕಾಂಗ್ರೆಸ್)- 3,98,723 (ಶೇ.46.75)

ವಿ.ಸುನೀಲ್ ಕುಮಾರ್ (ಬಿಜೆಪಿ)- 3,52,999 (ಶೇ.41.39)

ಎಸ್.ಎಲ್.ಬೋಜೇಗೌಡ (ಜೆಡಿಎಸ್)-72,080 (ಶೇ.8.45)

ಒಟ್ಟು ಮತದಾನವಾದ ಮತ- 8,52,824(ಶೇ.68.06)

ಗೆಲುವಿನ ಅಂತರ- 45,724 (ಶೇ.5.36)

2014ರ ಲೋಕಸಭಾ ಚುನಾವಣೆ

ಶೋಭಾ ಕರಂದ್ಲಾಜೆ (ಬಿಜೆಪಿ)- 5,81,168 (ಶೇ.56.20)

ಕೆ.ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)- 3,99,525 (ಶೇ.38.63)

ವಿ.ಧನಂಜಯಕುಮಾರ್ (ಜೆಡಿಎಸ್)-14,895 (ಶೇ.1.44)

ಒಟ್ಟು ಮತದಾನವಾದ ಮತ- 10,34,108(ಶೇ.74.54)

ಗೆಲುವಿನ ಅಂತರ- 1,81,643 (ಶೇ.17.57).

2019ರ ಲೋಕಸಭಾ ಚುನಾವಣೆ

ಶೋಭಾ ಕರಂದ್ಲಾಜೆ (ಬಿಜೆಪಿ)- 7,18,916 (ಶೇ.62.43)

ಪ್ರಮೋದ್ ಮಧ್ವರಾಜ್ (ಜೆಡಿಎಸ್)- 3,69,317 (ಶೇ.32.07)

ಪಿ.ಪರಮೇಶ್ವರ್ (ಬಿಎಸ್ಪಿ)-15,947 (ಶೇ.1.38)

ಒಟ್ಟು ಮತದಾನವಾದ ಮತ- 11,51,623(ಶೇ.76.07)

ಗೆಲುವಿನ ಅಂತರ- 3,49,599 (ಶೇ.30.37)

Writer - ವಾರ್ತಾಭಾರತಿ

contributor

Editor - Riyaz

contributor

Byline - ಬಿ.ಬಿ. ಶೆಟ್ಟಿಗಾರ್

contributor

Similar News