ಶಿಕ್ಷಣ ಇಲಾಖೆಯ ಆದೇಶದ ವಿರುದ್ಧ ಭೋಜೇಗೌಡ ಆಕ್ರೋಶ

Update: 2024-05-16 17:32 GMT

ಉಡುಪಿ, ಮೇ16: ಶಿಕ್ಷಣ ಇಲಾಖೆ ಮೇ13ರಿಂದ ಶಿಕ್ಷಕರು ಶಾಲಾ ಕರ್ತವ್ಯಕ್ಕೆ ಹಾಜರಾಗಬೇಕೆಂದು ಆದೇಶಿಸಿರುವುದರ ಕುರಿತು ವಿಧಾನಪರಿಷತ್‌ನಲ್ಲಿ ಶಿಕ್ಷಕರ ಪ್ರತಿನಿಧಿಯಾಗಿರುವ ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್.ಎಲ್. ಭೋಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರ ಶಿಕ್ಷಕರ ಸಮುದಾಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆಂದರೆ ಶಿಕ್ಷಣ ಇಲಾಖೆ ರಜಾ ಸಹಿತ ಇಲಾಖೆಯಾಗಿ ದ್ದರೂ ಸಹಶಿಕ್ಷಕರು ರಜಾ ಅವಧಿಯಲ್ಲಿ ಅಂದರೆ ಎಪ್ರಿಲ್ ತಿಂಗಳು ಬಹುತೇಕ ಅವಧಿಯಲ್ಲಿ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳಿಸಿರುತ್ತಾರೆ. ಅಲ್ಲದೆ ಚುನಾವಣಾ ಕರ್ತವ್ಯಗಳು ಚೆಕ್ ಪೋಸ್ಟ್, ಸೆಕ್ಟರ್, ಮಾಸ್ಟರ್ ಟ್ರೈನರ್ ಸೇರಿ ಹಲವು ನಿಯೋಜನೆ, ವಿಯೋಜನೆ ಕರ್ತವ್ಯಗಳಲ್ಲಿ ರಜಾ ಅವಧಿಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡುವುದು, ಪಾಸಿಂಗ್ ಪ್ಯಾಕೇಜ್ ಅಭ್ಯಾಸ ಮಾಡಿಸುವುದು, ಮಕ್ಕಳ ಮನೆ ಭೇಟಿ, ಪೋಷಕರ ಸಭೆಗಳು, ಪೋಷಕರ ಹಾಗೂ ತಾಯಂದಿರ ಸಭೆಗಳು, ವಿಷಯವಾರು ತಜ್ಞರಿಂದ ತರಬೇತಿಗಳು, ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಗುಂಪು ಅಧ್ಯಯನ ಕೆಲವು ಜಿಲ್ಲೆಗಳಲ್ಲಿ ರಾತ್ರಿ ಶಾಲೆಗಳು ಇಷ್ಟೆಲ್ಲ ಕಾರ್ಯಗಳನ್ನು ನಿರ್ವಹಿಸಿ ವಿದ್ಯಾಥಿಗಳು ಉತ್ತೀರ್ಣರಾಗಲು ಸಹಶಿಕ್ಷಕರು ಪ್ರಯತ್ನ ಪಡುತ್ತಾರಾದರೂ ಇಲಾಖೆಗಾಗಲೀ, ಅಧಿಕಾರಿ ಗಳಿಗಾಗಲಿ ಶಿಕ್ಷಕರ ಮೇಲೆ ಸ್ವಲ್ಪವೂ ಗೌರವ ಮಾನವೀಯತೆ ಇಲ್ಲ ಎಂಬುದು ಇದರಿಂದ ಎದ್ದು ಕಾಣುತ್ತದೆ ಎಂದವರು ಕಿಡಿ ಕಾರಿದ್ದಾರೆ.

ಶಿಕ್ಷಕರು ಇಲಾಖೆ ಕಾರ್ಯದಿಂದ ಹೊರತಾಗಿ ಸಿಕ್ಕಿರುವ ಮೇ ಒಂದು ತಿಂಗಳ ರಜಾ ಅವಧಿಯಲ್ಲಿ ಕುಟುಂಬ, ಮಕ್ಕಳ ಶೈಕ್ಷಣಿಕ ಪ್ರವೇಶ, ಮನೆ ಸ್ಥಳಾಂತರ ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಇದರ ಹೊರತಾ ಗಿಯೂ ಶಿಕ್ಷಕರು ವರ್ಷವಿಡೀ ಪಾಠಬೋಧನೆ ಮಾಡಿಯೂ ಮಕ್ಕಳು ಅನುತೀರ್ಣರಾದರೆ 10 ದಿನಗಳ ಪುನರ್ಬಲನ ತರಗತಿಗಳನ್ನು ತೆಗೆದುಕೊಂಡರೆ ಉತ್ತೀರ್ಣರಾಗುತ್ತಾರಾ ಎಂದವರು ಪ್ರಶ್ನಿಸಿದ್ದಾರೆ.

ಶಿಕ್ಷಣ ಇಲಾಖೆಯ ದಿನಕ್ಕೊಂದು ಆದೇಶದಿಂದ ಮಕ್ಕಳು ಮತ್ತು ಶಿಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಸರಕಾರವೇ ಮಕ್ಕಳ ಮತ್ತು ಶಿಕ್ಷಕರ ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ಕಾರಣವಾಗಿದೆ. ವರ್ಷವಿಡೀ ಶಿಕ್ಷಕರು, ಮಕ್ಕಳು ನಿರಂತರ ಒತ್ತಡ ದಲ್ಲಿ ಕಾರ್ಯನಿರತರಾಗಿರುತ್ತಾರೆ ಎಂಬ ಕಾರಣಕ್ಕಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ದಸರಾ ರಜೆ ಮತ್ತು ಬೇಸಿಗೆ ರಜೆಯನ್ನು ನೀಡಲಾಗುತ್ತಿದೆ ಎಂದು ಬೋಜೇಗೌಡ ನೆನಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಿಕ್ಷಕರ ಎಲ್ಲಾ ರಜೆಗಳನ್ನು ಕಡಿತಗೊಳಿಸಲಾಗುತ್ತಿದೆ. ಪ್ರೌಢಶಾಲಾ ಸಹಶಿಕ್ಷಕರು ರಜಾ ಸಹಿತ ಇಲಾಖೆ ನೌಕರರಾಗಿದ್ದು 227 ದಿನ ಕರ್ತವ್ಯ ನಿರ್ವಹಿಸುವ ಅವಧಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಇಓ, ಡಿಡಿಪಿಐ ಮೂಲಕ ಶಿಕ್ಷಕರನ್ನು ರಜಾ ಅವಧಿಯಲ್ಲಿಯೂ ಒತ್ತಾಯ ಪೂರ್ವಕವಾಗಿ ಕರ್ತವ್ಯಕ್ಕೆ ಹಾಜರಾಗಲು ಹೇಳುತ್ತಿರುವುದು ಮಕ್ಕಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ.

ಆದ್ದರಿಂದ ಮೇ 15ರ ಬದಲು ಎಸೆಸೆಲ್ಸಿ ಪುನರ್ಬಲನ ತರಗತಿಗಳನ್ನು ಮೇ 29ರಿಂದ ಜೂನ್ 6ರ ವರೆಗೆ 10 ದಿನಗಳ ಅವಧಿಗೆ ಆಯೋಜಿಸಬೇಕು ಮತ್ತು ಶಿಕ್ಷಣ ಇಲಾಖೆಯನ್ನು ರಜಾ ರಹಿತ ಇಲಾಖೆ ಎಂದು ಘೋಷಿಸಬೇಕು ಎಂಬುದು ಶಿಕ್ಷಕರ ಬೇಡಿಕೆಯಾಗಿದೆ. ಸ್ವೇಚ್ಛಾಚಾರದ ಕುರುಡು ಆದೇಶ ಹೊರಡಿಸಿದ ಸಾಕ್ಷರತಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇಲಾಖೆಯ ಸಚಿವರು ಶಿಕ್ಷಕರ ವಿಚಾರದಲ್ಲಿ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸರಕಾರ ಕೂಡಲೇ ಕಣ್ಣು ತೆರೆಯಬೇಕು. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಈ ಶೈಕ್ಷಣಿಕ ವರ್ಷ ಹೇಗಿರಬೇಕು ಎಂಬುದನ್ನು ನಿರ್ಧರಿಸಬೇಕು. ಈ ರೀತಿ ಮನಸ್ಸೊ ಇಚ್ಛೆ ನೀಡುವ ಆದೇಶಗಳಿಗೆ ಕಡಿವಾಣ ಹಾಕಬೇಕು ಎಂದು ಎಚ್.ಎಲ್. ಭೋಜೇಗೌಡ ಹೇಳಿಕೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News