ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣ: ಕೋರ್ಟ್‌ಗೆ ಶರಣಾದ ಆರೋಪಿ ಯೋಗೀಶ್ ಆಚಾರ್ಯ ಪೊಲೀಸ್ ಕಸ್ಟಡಿಗೆ

Update: 2024-05-29 14:59 GMT

ಯೋಗೀಶ್ ಆಚಾರ್ಯ

ಕಾಪು: ಪಾಂಗಾಳದ ಶರತ್ ಶೆಟ್ಟಿ(39) ಕೊಲೆ ಪ್ರಕರಣಕ್ಕೆ ಸಂಬಂಧಿ ಕಳೆದ ಒಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕಟಪಾಡಿಯ ಯೋಗೀಶ್ ಆಚಾರ್ಯ(36) ಎಂಬಾತ ಉಡುಪಿ ನ್ಯಾಯಾಲಯಕ್ಕೆ ಶರಣಾಗಿದ್ದು, ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಕಾಪು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡಿದ್ದ ಶರತ್ ಶೆಟ್ಟಿ ಹಾಗೂ ಯೋಗೀಶ್ ಆಚಾರ್ಯ ಸ್ನೇಹಿತರಾಗಿದ್ದು, 2022ರ ಡಿಸೆಂಬರ್ ತಿಂಗಳಲ್ಲಿ ಪಾಂಗಾಳದ ಜಾಗದ ತಕರಾರಿಗೆ ಸಂಬಂಧಿಸಿ ಯೋಗೀಶ್ ಆಚಾರ್ಯನಿಗೆ ಇತರರು ಹಲ್ಲೆ ನಡೆಸುತ್ತಿದ್ದ ವೇಳೆ ಜೊತೆಯಲ್ಲಿದ್ದ ಶರತ್ ಶೆಟ್ಟಿ ಸಹಾಯಕ್ಕೆ ಬಾರದೆ ಸ್ಥಳದಿಂದ ಓಡಿಹೋಗಿದ್ದನು.

ಇದೇ ದ್ವೇಷದಲ್ಲಿ ಯೋಗೀಶ್ ಆಚಾರ್ಯ, ತನ್ನ ಹಳೆಯ ಗೆಳೆಯ ಭೂಗತ ಪಾತಕಿ ಕಲಿ ಯೋಗೀಶ್ ಸಹಕಾರ ಕೋರಿ, ಆತನ ಸಹಚರನೊಂದಿಗೆ ಸೇರಿ 2023ರ ಫೆ.5ರಂದು ಶರತ್ ಶೆಟ್ಟಿಯನ್ನು ಪಾಂಗಾಳದಲ್ಲಿ ಕೊಲೆಗೈದಿದ್ದನು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಒಟ್ಟು ಆರು ಮಂದಿಯನ್ನು ಬಂಧಿಸಿದ್ದರು.

ಆ ನಂತರ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯ ಮೇ 23ರಂದು ಉಡುಪಿ ನ್ಯಾಯಾಲಯಕ್ಕೆ ಶರಣಾಗಿದ್ದು, ಬಳಿಕ ಪ್ರಕರಣದ ತನಿಖಾಧಿಕಾರಿಯಾಗಿರುವ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ ಬಾಡಿ ವಾರೆಂಟ್ ಮೂಲಕ ಆರೋಪಿ ಯೋಗೀಶ್ ಆಚಾರ್ಯನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ಕೊಂಡಿದ್ದಾರೆ.

ಪೊಲೀಸರು ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಿಸಿ ದಾಖಲೆಗಳನ್ನು ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಕಸ್ಟಡಿ ಅವಧಿ ಮುಗಿದಿರುವುದರಿಂದ ಮೇ 30ಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಿ, ಮತ್ತೆ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ಕಲಿ ಯೋಗೀಶ್ ಹೊರತು ಪಡಿಸಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News