ತೆಂಕನಿಡಿಯೂರು ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

Update: 2024-06-10 14:25 GMT

ಉಡುಪಿ : ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಐಕ್ಯೂಎಸಿ, ಯೂತ್ ರೆಡ್‌ಕ್ರಾಸ್, ರೋವರ್ಸ್‌-ರೇಂಜರ್ಸ್‌, ಎನ್ನೆಸ್ಸೆಸ್ ಹಾಗೂ ರೆಡ್‌ಕ್ರಾಸ್ ಸೊಸೈಟಿ ಉಡುಪಿ-ಕುಂದಾಪುರ, ಹೆಚ್.ಡಿ.ಎಫ್.ಸಿ. ಬ್ಯಾಂಕ್ ಹಾಗೂ ಟಾರ್ಗೆಟ್ ಫ್ರೆಂಡ್ಸ್ ಮಲ್ಪೆ-ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಶಿಬಿರ ಉದ್ಘಾಟಿಸಿದ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರದ ಸಭಾಪತಿ ಜಯಕರ ಶೆಟ್ಟಿ ಮಾತನಾಡಿ, ನಾವು ದಾನ ಮಾಡುವ ರಕ್ತವನ್ನು ಮೂರು ವರ್ಗಗಳಾಗಿ ವಿಂಗಡಿಸಿ ತುರ್ತು ಸಂದರ್ಭದಲ್ಲಿ ಬಳಕೆಯಾಗಿ ಮೂರು ಜೀವಗಳನ್ನು ಕಾಪಾಡಲು ಸಹಕಾರಿಯಾಗುತ್ತದೆ. ಆದ್ದರಿಂದ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಮಾನವೀಯತೆ ಮೆರೆಯುವಂತೆ ಕರೆ ನೀಡಿದರು.

ಅತಿಥಿಗಳಾಗಿ ಭಾಗವಹಿಸಿದ ರೆಡ್‌ಕ್ರಾಸ್ ಸೊಸೈಟಿ ಉಡುಪಿಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಗೌರವ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಹಾಗೂ ಹೆಚ್‌ಡಿಎಫ್‌ಸಿ ಉಡುಪಿಯ ಡಬ್ಲ್ಯೂಬಿಒ ಮ್ಯಾನೇಜರ್ ರಾಘವೇಂದ್ರ ರಾವ್ ರಕ್ತದಾನದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ನಿತ್ಯಾನಂ ವಿ. ಗಾಂವ್ಕರ್, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಕ್ತದ ತೀವ್ರ ಅಭಾವವಿದ್ದು ಈ ನಿಟ್ಟಿನಲ್ಲಿ ಶಿಬಿರ ಔಚಿತ್ಯಪೂರ್ಣ ಎಂದರು.

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸೊಸೈಟಿಯ ಪದಾಧಿಕಾರಿಗಳು, ಲಯನ್ ಕ್ಲಬ್ ಉಡುಪಿ ಅಧ್ಯಕ್ಷ ಗೀತಾ ವಾದಿರಾಜ್, ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ, ಟಾರ್ಗೆಟ್ ಫ್ರೆಂಡ್ಸ್ ಮಲ್ಪೆಯ ಮುನಾವರ್ ಕೆ. ಉಪಸ್ಥಿತರಿದ್ದರು.

ರೋವರ್ಸ್‌ ಸಂಚಾಲಕರಾದ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿದರೆ, ಯೂತ್ ರೆಡ್‌ಕ್ರಾಸ್ ಸಂಚಾಲಕ ಪ್ರಶಾಂತ್ ನೀಲಾವರ ವಂದಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಒಟ್ಟು 91 ಯೂನಿಟ್ ರಕ್ತ ಸಂಗ್ರಹಿಸಿ ರಕ್ತನಿಧಿ ಕೇಂದ್ರ, ರೆಡ್‌ಕ್ರಾಸ್ ಸೊಸೈಟಿ ಕುಂದಾಪುರಕ್ಕೆ ನೀಡಲಾಯಿತು. ಕಾಲೇಜಿನ ವಿದ್ಯಾರ್ಥಿ ಗಳ ಜೊತೆಗೆ ಬೋಧಕ-ಬೋಧಕೇತರ ಸಿಬ್ಬಂದಿಗಳೂ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News