ಬಡಾನಿಡಿಯೂರು ಪಿಡಿಓ ವಿರುದ್ಧ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

Update: 2024-06-12 14:20 GMT

ಮಲ್ಪೆ, ಜೂ.12: ಮೂರು ತಿಂಗಳ ಹಿಂದೆ ವರ್ಗಾವಣೆಗೊಂಡು ಇದೀಗ ಮತ್ತೆ ವಾಪಾಸ್ಸಾಗಿರುವ ಬಡಾನಿಡಿಯೂರು ಗ್ರಾಮ ಪಂಚಾಯತ್ ಪಿಡಿಓ ವಿರುದ್ಧ ಗ್ರಾಮಸ್ಥರು ಇಂದು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕಳೆದ ಆರು ವರ್ಷಗಳಿಂದ ಬಡಾನಿಡಿಯೂರು ಪಿಡಿಓ ಆಗಿ ಕರ್ತವ್ಯ ನ ನಿರ್ವಹಿಸುತ್ತಿದ್ದ ಮಾಲತಿ, ಸರಿಯಾಗಿ ಕೆಲಸ ಮಾಡದ ಆರೋಪದಡಿ ಮೂರು ತಿಂಗಳ ಹಿಂದೆ ಅಮಾಸೆಬೈಲಿಗೆ ವರ್ಗಾವಣೆಗೊಂಡಿದ್ದರು. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪಿಡಿಒ ರಾಜೇಶ್ ಶೆಣೈ ಅವರನ್ನು ಬಡಾನಿಡಿಯೂರು ಗ್ರಾಪಂಗೆ ನಿಯುಕ್ತಿಗೊಳಿಸಲಾಗಿತ್ತು. ಈ ಮಧ್ಯೆ ನ್ಯಾಯಾಲಯದ ಮೊರೆ ಹೋದ ಮಾಲತಿ ತನ್ನ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು.

ಅದರಂತೆ ಮತ್ತೆ ಬಡಾನಿಡಿಯೂರು ಗ್ರಾಪಂಗೆ ವರ್ಗಾವಣೆ ಮಾಡಿಸಿ ಕೊಂಡ ಮಾಲತಿ, ಅಧಿಕಾರ ವಹಿಸಲು ಮುಂದಾದ ವಿಷಯ ತಿಳಿದ ಗ್ರಾಮಸ್ಥರು, ಬೆಳಗ್ಗೆಯೇ ಗ್ರಾಪಂ ಕಚೇರಿ ಎದುರು ಜಮಾಯಿಸಿ ಕಚೇರಿಗೆ ಬೀಗ ಜಡಿದರು. ಮಾಲತಿಯವರನ್ನು ಬೇರೆ ಕಡೆ ವರ್ಗಾಯಿಸಿ ರಾಜೇಶ್ ಶೆಣೈ ಅವರನ್ನೇ ಮುಂದುವರೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಯಶೋದ ಆಚಾರ್ಯ ಮಾತನಾಡಿ, ಪ್ರಸ್ತುತ ಪಿಡಿಒ ನಮ್ಮ ಆಡಳಿತ ಮಂಡಳಿಯು ಯಾವುದೇ ವಿಷಯ ಪ್ರಸಾತಿಪ್ತಿಸಿದರೂ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸುವು ದಿಲ್ಲ. ಕೆಲಸ ಕಾರ್ಯಕ್ಕೆ ಕಚೇರಿಗೆ ಬರುವ ಗ್ರಾಮದ ಜನರನ್ನು ಸರಿಯಾಗಿ ವಿಚಾರಿಸುವುದಿಲ್ಲ. ಬಡ ಜನರ ಕಷ್ಟಕ್ಕೆ ಸ್ಪಂದಿಸದೆ ಅವರಿಗೆ ಬೇಕಾದ ವ್ಯಕ್ತಿಗಳಿಗೆ ಮಾತ್ರ ಕೆಲಸ ಮಾಡಿಕೊಡುತ್ತಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಬಡಾನಿಡಿ ಯೂರು ಗ್ರಾಪಂನಲ್ಲಿ ಪಿಡಿಓ ಬಗ್ಗೆ ಭ್ರಷ್ಟಾಚಾರ, ಅವ್ಯವಹಾರದ ಆರೋಪ ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಮಾತನಾಡಿ ಅವರನ್ನು ಅಮಾಸೆಬೈಲಿಗೆ ವರ್ಗಾವಣೆ ಮಾಡಲಾಗಿತ್ತು. ಈ ಮಧ್ಯೆ ಅವರು ಕಾನೂನಿನ ಮೂಲಕ ತಡೆಯಾಜ್ಞೆ ತಂದು ಮತ್ತೆ ಬಡಾನಿಡಿಯೂರಿಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ. ಇದೀಗ ಈ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಗಳ ಜತೆ ಮಾತುಕತೆ ನಡೆಸಿ ತಕ್ಷಣ ಪರಿಹಾರ ಕಲ್ಪಿಸಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಯಶ್‌ಪಾಲ್ ಎ.ಸುವರ್ಣ ಅವರು ಮಾತನಾಡಿ, ಇಂತಹ ಘಟನೆಗಳು ನಡೆ ಯಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಈ ವಿಚಾರವನ್ನು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ಈಗಾಗಲೇ ತರಲಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ತಿಳಿಸಿದ್ದಾರೆ. ಮುಂದೆ ಗ್ರಾಮದಲ್ಲಿ ಇಂತಹ ಯಾವುದೇ ಪ್ರತಿಭಟನೆಗಳು ನಡೆಯಲು ಅಧಿಕಾರಿಗಳು ಅವಕಾಶ ಮಾಡಿ ಕೊಡಬಾರದು ಎಂದು ಸೂಚನೆ ನೀಡಿದರು.

ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯ ಆಗಮಿಸಿ, ಇಲ್ಲಿಗೆ ವರ್ಗಾವಣೆಗೊಂಡ ಪಿಡಿಓ ಮಾಲತಿ ಅವರಿಗೆ ಅಧಿಕಾರ ಕೊಡುವುದಿಲ್ಲ. ಹೊಸ ಪಿಡಿಓ ನೇಮಕವಾಗುವವರೆಗೆ ಪಂಚಾಯತ್‌ನ ಎಲ್ಲ ಕೆಲಸಗಳನ್ನು ಈಗಿರುವ ಕಾರ್ಯದರ್ಶಿಗೆ ವಹಿಸಿಕೊಡಲಾಗುತ್ತದೆ ಎಂದರು. ಬಳಿಕ ಅವರು ಗ್ರಾಮಸ್ಥರು ಪಂಚಾಯತ್‌ಗೆ ಹಾಕಿದ ಬೀಗವನ್ನು ತೆಗೆಯುವಂತೆ ಮನವಿ ಮಾಡಿದರು.

ಗ್ರಾಪಂ ಉಪಾಧ್ಯಕ್ಷ ಗಿರೀಶ್ ಸಾಲ್ಯಾನ್, ಮಾಜಿ ಅಧ್ಯಕ್ಷ ಪ್ರಭಾಕರ್ ತಿಂಗಳಾಯ ಮಾತನಾಡಿದರು. ಗ್ರಾಪಂ ಸದಸ್ಯರಾದ ಪ್ರವೀಣ್ ಕಾಂಚನ್, ಜೋಸೆಫ್ ಪಿಂಟೋ, ಆಶಾ, ಶೋಭಾ ಸಾಲ್ಯಾನ್, ಗ್ರಾಮಸ್ಥರಾದ ನಾಗೇಂದ್ರ ಮೆಂಡನ್, ಸುಂದರ್ ಜತ್ತನ್ ಮೊದಲಾದವರು ಉಪಸ್ಥಿತದ್ದರು. ಶಿವಾನಂದ ಸುವರ್ಣ ಸ್ವಾಗತಿಸಿ, ವಂದಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News