ಕರ್ಕಶ ಹಾರ್ನ್ ತೆರವಿಗೆ ಮುಗಿದ ಗಡುವು: ಸಿಟಿಬಸ್‌ಗಳ ವಿರುದ್ಧ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ

Update: 2024-06-16 11:26 GMT

ಉಡುಪಿ, ಜೂ.16: ಉಡುಪಿ ಸಂಚಾರ ಪೊಲೀಸರು ನೀಡಿರುವ ಗಡುವು ಮುಗಿದ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿ ಉಡುಪಿ ಸಿಟಿ ಬಸ್‌ಗಳ ಕರ್ಕಶ ಹಾನ್‌ಗಳನ್ನು ತೆರವುಗೊಳಿಸಿ ದಂಡ ವಿಧಿಸಲಾಯಿತು.

ಜೂ.3ರಂದು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆಯಲ್ಲಿ ಉಡುಪಿಯ ಸಿಟಿ ಹಾಗೂ ಸರ್ವಿಸ್ ಬಸ್‌ಗಳಲ್ಲಿ ಅಳವಡಿಸಲಾದ ಕರ್ಕಶ ಹಾರ್ನ್‌ಗಳನ್ನು ಜೂ.15ರೊಳಗೆ ಕಡ್ಡಾಯವಾಗಿ ತೆರವುಗೊಳಿಸುವಂತೆ ಸೂಚನೆ ನೀಡಲಾಯಿತು.

ಅದರಂತೆ ಗಡುವು ಮುಗಿದ ಹಿನ್ನೆಲೆಯಲ್ಲಿ ಉಡುಪಿ ಸಂಚಾರ ಪೊಲೀಸ್ ಠಾಣೆಯ ಎಸ್ಸೈ ಸುದರ್ಶನ್ ನೇತೃತ್ವದಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಏಳು ಬಸ್‌ಗಳಲ್ಲಿದ್ದ ಕರ್ಕಶ ಹಾರ್ನ್‌ಗಳನ್ನು ತೆರವುಗೊಳಿಸಲಾಯಿತು. ಬಸ್‌ಗಳ ವಿರುದ್ಧ ತಲಾ 500ರೂ.ನಂತೆ ಒಟ್ಟು 3500ರೂ. ದಂಡ ವಿಧಿಸಲಾಯಿತು. ಎರಡನೇ ಬಾರಿಗೆ 1000ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.

ಈಗಾಗಲೇ ಗಡುವು ನೀಡಿರುವ ಹಿನ್ನೆಲೆಯಲ್ಲಿ ಬಹುತೇಕ ಸಿಟಿಬಸ್‌ಗಳು ಕರ್ಕಶ ಹಾರ್ನ್‌ಗಳನ್ನು ತೆರವುಗೊಳಿಸಿದೆ. ರವಿವಾರ ಆಗಿರುವುದರಿಂದ ಕೆಲವೇ ಸಿಟಿಬಸ್‌ಗಳು ಮಾತ್ರ ನಮಗೆ ಇಂದು ಸಿಕ್ಕಿದೆ. ಆದುದರಿಂದ ಈ ಕಾರ್ಯಾ ಚರಣೆ ಮಂಗಳವಾರದಿಂದ ಮತ್ತೆ ಮುಂದುವರೆಯಲಿದೆ. ಮುಂದೆ ಸರ್ವಿಸ್ ಬಸ್‌ಗಳ ವಿರುದ್ಧವೂ ಕಾರ್ಯಚರಣೆ ನಡೆಸಲಾ ಗುವುದು ಎಂದು ಎಸ್ಸೈ ಸುದರ್ಶನ್ ತಿಳಿಸಿದ್ದಾರೆ.

ಅದೇ ರೀತಿ ಬಸ್ಸಿನ ಒಳಗಿನ ಅಳವಡಿಸಲಾದ ಟೆಪ್ ರೆಕಾರ್ಡ್ ಹಾಗೂ ಸ್ಪೀಕರ್‌ಗಳನ್ನು ಕಡ್ಡಾಯವಾಗಿ ತೆಗೆದು ಹಾಕುವಂತೆಯೂ ಸಭೆಯಲ್ಲಿ ಪೊಲೀಸರು ಬಸ್ ಮಾಲಕರಿಗೆ ಸೂಚನೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News