ಹಿಂಸೆಯನ್ನು ವಿರೋಧಿಸುತ್ತಿದ್ದ ಪಟ್ಟಾಭಿ ನಕ್ಸಲ್ ಆಗಲು ಸಾಧ್ಯವೇ ಇಲ್ಲ: ಚ.ಸರ್ವಮಂಗಳ

Update: 2024-07-05 14:45 GMT

ಉಡುಪಿ: ಸಾಮಾಜಿಕ ಹಾಗೂ ರಾಜಕೀಯವಾಗಿ ಆಗುತ್ತಿರುವ ಅನ್ಯಾಯವನ್ನು ಏಕಾಂಗಿಯಾಗಿ ಪ್ರತಿಭಟಿಸುತ್ತಿದ್ದ ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಾಧ್ಯಾಪಕ ಎಚ್.ಪಟ್ಟಾಭಿರಾಮ ಸೋಮಯಾಜಿ ಅವರಿಗೆ ನಕ್ಸಲ್, ಅರ್ಬನ್ ನಕ್ಸಲೈಟ್ ಎಂಬ ಹಣೆಪಟ್ಟಿ ಕಟ್ಟಲಾಯಿತು. ಗಾಂಧಿಜೀ ಅನುಯಾಯಿ ಆಗಿದ್ದ ಪಟ್ಟಾಭಿ, ನಕ್ಸಲ್ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರು ಹಿಂಸೆಯನ್ನು ತುಂಬಾ ವಿರೋಧಿಸುತ್ತಿದ್ದರು ಎಂದು ಲೇಖಕಿ ಚ.ಸರ್ವಮಂಗಳ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜು ಉಡುಪಿ ಹಾಗೂ ಪಟ್ಟಾಭಿ ಗೆಳೆಯರ ಬಳಗದ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾಜಿಕ ಹೋರಾಟಗಾರ, ನಿವೃತ್ತ ಪ್ರಾಧ್ಯಾಪಕ ಎಚ್.ಪಟ್ಟಾಭಿರಾಮ ಸೋಮಯಾಜಿ ಸ್ಮರಣೆ ಕಾರ್ಯಕ್ರಮದಲ್ಲಿ ಅವರ ‘ಆ್ಯನ್ ಅಲ್ಫಬೇಟಿಕಲ್ ಅಲ್ಟರ್ಕೇಶನ್’ ಇಂಗ್ಲಿಷ್ ಕವಿತೆಗಳ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಪಟ್ಟಾಭಿ ಹಾಗೆ ಬದುಕಲು ಯಾರಿಗೂ ಸಾಧ್ಯವಿಲ್ಲ. ತನ್ನ ಕೆಲಸಕ್ಕಾಗಿಯೇ ತನ್ನನ್ನು ತಾನು ಬದಲಾಯಿಸಿಕೊಂಡವರಲ್ಲ. ಅನ್ಯಾಯವನ್ನು ಎಂದಿಗೂ ಪ್ರತಿಭಟಿಸದೆ ಇರಲು ಅವರಿಗೆ ಆಗುತ್ತಿರಲಿಲ್ಲ. ಅವರು ಸಾಮಾಜಿಕ ಜವಾಬ್ದಾರಿ, ಹೊಣೆಗಾರಿಕೆ ಯನ್ನು ಹೊತ್ತು ತಿರುಗಾಡುತ್ತಿದ್ದರು. ಮನುಷ್ಯ ಮನುಷ್ಯರಿಂದ ಸೈಂಧಾತಿಕವಾಗಿ ಹತ್ತಿರ ಹೋಗುತ್ತಿದ್ದ ಅವರು, ಜಾತಿ ಇಸಂಗಳು ಬಂದಾಗ ದೂರ ಹೋಗಿ ಪ್ರತಿಭಟಿಸುತ್ತಿದ್ದರು ಎಂದರು.

ಮಹಾತ್ಮ ಗಾಂಧಿ, ಅಂಬೇಡ್ಕರ್ ಹಾಗೂ ವಿವೇಕಾನಂದ ಅವರನ್ನು ಪಟ್ಟಾಭಿ ಓದಿ ಅರ್ಥೈಸಿಕೊಂಡ ಹಾಗೆ ಯಾರು ಇರಲು ಸಾಧ್ಯವಿಲ್ಲ. ಬುದ್ಧಿಯಲ್ಲಿ ಕಲಬೆರಕೆಯನ್ನು ವಿರುದ್ಧ ಅವರು ತಾತ್ವಿಕ ಪ್ರತಿಭಟನೆ ಮಾಡುತ್ತಿದ್ದರು. ಜಾತಿ ಬಗ್ಗೆ ಎಂದಿಗೂ ಮಾತನಾಡಿದವರಲ್ಲ. ಆದರೆ ಜಾತಿ ಮಾಡಿ ಗೋಡೆಗಳನ್ನು ಕಟ್ಟುವರ ಬಗ್ಗೆ ತೀವ್ರವಾದ ಅಕ್ರೋಶ ಅವರಿಗೆ ಇತ್ತು. ಅದನ್ನು ಅಲ್ಲಲ್ಲಿಯೇ ಪ್ರತಿಭಟಿಸುತ್ತಿದ್ದರು. ಬುದ್ಧಿ ಭ್ರಷ್ಟ ಆಗಬಾರದು ಎಂಬುದು ಅವರ ನಿಲುವು ಆಗಿತ್ತು. ಸಾಯುವವರೆಗೆ ಅದನ್ನು ಎಲ್ಲೂ ಭ್ರಷ್ಟ ಆಗಲು ಬಿಡಲಿಲ್ಲ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ ವಹಿಸಿದ್ದರು. ಅನುವಾದಕ, ಕವಿ ಕಮಲಾಕರ ಕಡವೆ ಕೃತಿ ಪರಿಚಯ ಮಾಡಿದರು. ರಂಗನಾಥ ಹೊಸೂರು, ಅನಸೂಯ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಪ್ರೊ.ಹಯವದನ ಮೂಡುಸಗ್ರಿ, ಮುಹಮ್ಮದ್ ಶರೀಫ್ ಉಪಸ್ಥಿತರಿದ್ದರು. ಅಪರಾಜಿತೆ ಪ್ರಕಾಶನದ ಮೀನಾ ಮೈಸೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News