ಎಲ್ಲರ ಸಮನ್ವಯತೆಯಿಂದ ಸರಕಾರಿ ಶಾಲೆಗಳು ಗಟ್ಟಿಯಾಗಲು ಸಾಧ್ಯ: ಡಾ.ನಿರಂಜನಾರಾಧ್ಯ

Update: 2024-07-05 14:48 GMT

ಕುಂದಾಪುರ: ಸರಕಾರಿ ಶಾಲೆಗಳು ಗುಣಾತ್ಮಕವಾಗಲು ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಶಿಕ್ಷಣ ಇಲಾಖೆಯ ಸಮನ್ವಯತೆ ಕೆಲಸ ಅಗತ್ಯವಾಗಿದೆ. ಇಲ್ಲವಾದರೆ ಶಾಲೆಗಳು ಗಟ್ಟಿಯಾಗುವುದಿಲ್ಲ. ನಾಯಕತ್ವ ಬದಲಾವಣೆ ಬಂದಾಗ ತಯಾರಾಗ ಬೇಕು. ಸಮಾನ ಶಾಲೆಗಳ ನಿರ್ಮಾಣದ ಹಿತದೃಷ್ಟಿ ಯಿಂದ ಉತ್ಸಾಹಿಗಳಿಗೆ ನಾಯಕತ್ವ ನೀಡುವುದು ಸಮನ್ವಯ ವೇದಿಕೆಯ ಉದ್ದೇಶವಾಗಿದೆಂದು ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ಡಾ.ವಿ.ಪಿ.ನಿರಂಜನಾರಾಧ್ಯ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಉಡುಪಿ ಜಿಲ್ಲೆಯ ವತಿಯಿಂದ ಶುಕ್ರವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಎಸ್‌ಡಿಎಂಸಿ ಪದಾಧಿಕಾರಿ ಗಳ ಅಭಿನಂದನಾ ಸಮಾರಂಭ ಹಾಗೂ ಎಸ್‌ಡಿಎಂಸಿ ಸದಸ್ಯರುಗಳ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಕಾರ್ಯ ಗಾರದಲ್ಲಿ ಅವರು ಮಾತನಾಡುತಿದ್ದರು.

ಸರಕಾರಿ ಶಾಲೆಗಳು ಉಳಿಯಬೇಕು. ಬೆಳೆದು ನೆರೆ ಹೊರೆಯ ಶಾಲೆಗಳಿಗೆ ಸಮಾನ ಶಾಲೆಗಳಾಗಬೇಕು. ಭಾರತದಲ್ಲಿ 2002ರಲ್ಲಿ ಸಂವಿಧಾನ ತಿದ್ದುಪಡಿ ಆದಾಗ ಜೀವಿಸುವ ಹಕ್ಕು ಹಾಗೂ ೨೧ಎ ಅಡಿಯಲ್ಲಿ ದೇಶದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಹಕ್ಕು ನೀಡಲಾಗಿದೆ. ಹೀಗಾಗಿ ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುವಾಗ ಒಂಭತ್ತು ಮೂಲಭೂತ ಸೌಕರ್ಯಗಳಿರಬೇಕು ಎಂದು ಆದೇಶಿಸಲಾಗಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಇದೆಲ್ಲವೂ ಪರಿಪೂರ್ಣ ವಾಗದೇ ಇರುವುದು ದುರಂತ ಎಂದರು.

ಮಕ್ಕಳಿಗೆ ಸಂಪೂರ್ಣ ಹಕ್ಕು ಸಿಗದಿದ್ದರಿಂದ ಅವರ ಶಿಕ್ಷಣದ ಪರಿಸ್ಥಿತಿ ಶೋಚನೀಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಆರ್.ಟಿ.ಇ ಪ್ರಾರಂಭವಾದ 2014-15ರಲ್ಲಿ 716 ಇದ್ದ ಶಾಲೆಗಳು 676ಕ್ಕೆ ಇಳಿದು 40 ಸರಕಾರಿ ಶಾಲೆಗಳು ಮುಚ್ಚಲ್ಪಟ್ಟಿದೆ ಎಂದು ನಿರಂಜನಾರಾಧ್ಯ ಖೇದ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಎಸ್‌ಡಿಎಂಸಿ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ನಡೆಯಿತು. ಎಸ್‌ಡಿಎಂಸಿ ಸಮನ್ವಯ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಎಂಸಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ಜಿ.ಗಂಗವಾಡಿ, ಪ್ರಧಾನ ಕಾರ್ಯದರ್ಶಿ ಪಾರ್ವತಿ ಜಿ.ಎಸ್. ದಾವಣಗೆರೆ, ಮೈಸೂರು ವಿಭಾಗ ಉಸ್ತುವಾರಿ ರಾಘವೇಂದ್ರ ಗಾಣಿಗ, ಉಡುಪಿ ಜಿಲ್ಲಾ ಕಾರ್ಯದರ್ಶಿ ಗುರುರಾಜ ಕಾಂಚನ್, ಉಪಾಧ್ಯಕ್ಷ ಅಶೋಕ್ ಪರ್ಕಳ, ಖಜಾಂಚಿ ಸಾರಿಕಾ ಮಹೇಶ್ ಕಾರ್ಕಳ, ಹೆಮ್ಮಾಡಿ ಜನತಾ ಶಾಲಾ ಮಂಡಳಿಯ ರಘುರಾಮ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸಮನ್ವಯ ವೇದಿಕೆ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಸುಮಾ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಹರಿಶ್ಚಂದ್ರ ಆಚಾರ್ಯ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News