ಭಾರೀ ಮಳೆ: ಎಂಟು ಮನೆಗಳಿಗೆ ಹಾನಿ; ನಾಲ್ಕು ಲಕ್ಷ ರೂ. ನಷ್ಟ

Update: 2024-07-05 15:48 GMT

ಉಡುಪಿ, ಜು.5: ಕಳೆದೆರಡು ದಿನಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬೈಂದೂರು ತಾಲೂಕು ಸೇರಿದಂತೆ ಹೆಚ್ಚಿನೆಲ್ಲಾ ಕಡೆಗಳಲ್ಲಿ ನೆರೆ ಇಳಿದಿದ್ದರೂ, ಆಸ್ತಿ-ಪಾಸ್ತಿಗಳಿಗೆ ಹಾಗೂ ಸೊತ್ತುಗಳಿಗೆ ಆಗುತ್ತಿರುವ ಹಾನಿ ಮುಂದುವರಿದಿದೆ.

ಶುಕ್ರವಾರ ಜಿಲ್ಲೆಯಲ್ಲಿ ಎಂಟು ಮನೆಗಳಿಗೆ ಹಾನಿಯಾದ ವರದಿ ಬಂದಿದ್ದು, ಇದರಿಂದ ಸುಮಾರು ನಾಲ್ಕು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಅಲ್ಲದೇ ನಾಲ್ಕು ಜಾನುವಾರು ಕೊಟ್ಟಿಗೆಗೆ ಹಾನಿ ಹಾಗೂ ಒಂದು ಕಡೆ ತೋಟಗಾರಿಕಾ ಬೆಳೆಗೆ ಹಾನಿಯಾದ ವರದಿಗಳೂ ಬಂದಿವೆ.

ಕಾರ್ಕಳ ತಾಲೂಕು ನಿಟ್ಟೆಯಲ್ಲಿ ದೇವರಾಜು ಎಂಬವರ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ನಿಟ್ಟೆಯ ಉದಯ ನಾಯ್ಕ, ಲಕ್ಷ್ಮಣ ಮೂಲ್ಯ ಹಾಗೂ ವೇಲು ಅವರ ಮನೆಗಳೂ ಗಾಳಿ-ಮಳೆಯಿಂದ ಹಾನಿಗೊಂಡಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ ನಷ್ಟದ ವರದಿ ಬಂದಿದೆ.

ಕಾಪುವಿನಲ್ಲಿ ನಡ್ಸಾಲಿನ ಸತೀಶ್ ವೆಂಕಟೇಶ್ ಹಾಗೂ ಮೂಳೂರಿನ ಶಕುಂತಲಾ ಅವರ ಮನೆಯೂ ಗಾಳಿ-ಮಳೆಗೆ ಹಾನಿಗೊಳಗಾಗಿದ್ದು ತಲಾ 30ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರದ ಬೇಳೂರು ಗ್ರಾಮದ ಶೇಖರ ಶೆಟ್ಟಿ ಹಾಗೂ ಕಂದಾವರದ ಗೋವಿಂದ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.

ಕುಂದಾಪುರ ತಾಲೂಕು ಹೆಂಗವಳ್ಳಿಯ ಕನಕಮ್ಮ ಶೆಡ್ತಿ ಇವರ ತೋಟಗಾರಿಕಾ ಬೆಳೆಗೆ ಹಾನಿಯಾಗಿದ್ದರೆ, ಬ್ರಹ್ಮಾವರ ಐರೋಡಿಯ ನಾರಾಯಣ ಕುಲಾಲ್, ಕುಂದಾಪುರದ ಹಾಲಾಡಿಯ ಲಕ್ಷ್ಮೀ, ಶಂಕರನಾರಾಯಣದ ವನಜ ಶೆಡ್ತಿ ಹಾಗೂ ಶಂಕರ ಕುಲಾಲರ ಜಾನುವಾರು ಕೊಟ್ಟಿಗೆಗಳಿಗೆ ಭಾಗಶ: ಹಾನಿಯಾದ ವರದಿ ಬಂದಿದೆ.

38.6ಮಿ.ಮೀ.ಮಳೆ: ಸತತ ಎರಡು ದಿನ 100ಮಿ.ಮೀ.ಗೂ ಅಧಿಕ ಮಳೆ ಸುರಿದ ಜಿಲ್ಲೆಯಲ್ಲಿ ಇಂದು ಸರಾಸರಿ 38.6 ಮಿ.ಮೀ. ಮಳೆಯಾಗಿದೆ. ಬ್ರಹ್ಮಾವರದಲ್ಲಿ 46.1, ಕುಂದಾಪುರದಲ್ಲಿ 44.2, ಬೈಂದೂರಿನಲ್ಲಿ 40.7, ಉಡುಪಿಯಲ್ಲಿ 35.9, ಕಾರ್ಕಳದಲ್ಲಿ 33.7, ಹೆಬ್ರಿಯಲ್ಲಿ 33.6 ಹಾಗೂ ಕಾಪುವಿನಲ್ಲಿ 28.0ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News