ಡೆಂಗಿ ರೋಗದ ಬಗ್ಗೆ ಭಯ ಬೇಡ; ಅಗತ್ಯ ಮುನ್ನೆಚ್ಚರಿಕೆ ವಹಿಸಿ: ಉಡುಪಿ ಜಿಲ್ಲಾಧಿಕಾರಿ

Update: 2024-07-05 15:51 GMT

ಬ್ರಹ್ಮಾವರ, ಜು.5: ಡೆಂಗಿ ಸೇರಿದಂತೆ ಯಾವುದೇ ರೋಗಗಳು ಬಂದು ಚಿಕಿತ್ಸೆ ಪಡೆಯುವ ಬದಲು ರೋಗಗಳು ಬಾರ ದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ನಡೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ಶುಕ್ರವಾರ ಬ್ರಹ್ಮಾವರದ ವಾರಂಬಳ್ಳಿ ಗ್ರಾಮ ಪಂಚಾಯತ್‌ನ ಮೀನು ಮಾರುಕಟ್ಟೆಯ ಮುಂಭಾಗದಲ್ಲಿ ಡೆಂಗಿ ಜ್ವರ ನಿಯಂತ್ರಣ ಕುರಿತು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಹಾಗೂ ಪ್ರತಿ ಶುಕ್ರವಾರ ಒಣ ದಿನ ಆಚರಣೆಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಡೆಂಗಿ ಜ್ವರವು ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ಕಂಡುಬರುತ್ತದೆ. ಈ ರೋಗ ಸೊಳ್ಳೆಗಳಿಂದ ಹರಡುವಂತದ್ದು. ಸಾಮಾನ್ಯವಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ನೀರಿನಲ್ಲಿ ಮೊಟ್ಟೆಗಳನ್ನು ಇಡುವ ಮೂಲಕ ಆಗುತ್ತದೆ. ಸೊಳ್ಳೆಗಳ ಉತ್ಪತ್ತಿ ನಿಯಂತ್ರಣಕ್ಕೆ ನಾವೆಲ್ಲರೂ ಆದ್ಯತೆ ನೀಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರದ ನಿರ್ವಹಣೆಯನ್ನು ಉತ್ತಮ ವಾಗಿ ಮಾಡಬೇಕು ಎಂದರು.

ಸೊಳ್ಳೆಗಳು ನೀರು ಶೇಖರವಾಗುವ ಸಿಮೆಂಟ್ ತೊಟ್ಟಿ, ಡ್ರಂ, ಮಡಕೆ, ಟಯರ್, ಎಳನೀರಿನ ಚಿಪ್ಪುಗಳಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಈ ರೀತಿ ಮರಿ ಮಾಡಲು 8ರಿಂದ 11 ದಿನಗಳು ಬೇಕಾಗುತ್ತವೆ. ವಾರದ ಶುಕ್ರವಾರದಲ್ಲಿ ಒಂದು ದಿನ ಒಣ ದಿನವಾಗಿ ಆಚರಿಸಿದಾಗ ಸೊಳ್ಳೆಗಳನ್ನು ಮೂಲದಲ್ಲಿಯೇ ತಡೆಗಟ್ಟಿ ಡೆಂಗಿ ನಿಯಂತ್ರಿಸಲು ಸಾಧ್ಯ ಎಂದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ ಮನೆಯಲ್ಲೂ ತಪ್ಪದೇ ಪ್ರತಿ ಶುಕ್ರವಾರ ಮನೆಯ ಒಳಗೆ ಹಾಗೂ ಹೊರಗೆ ನೀರು ಶೇಖರಣೆ ಮಾಡುವ ಎಲ್ಲಾ ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಂ, ಮಡಿಕೆ ಮುಂತಾದವುಗಳನ್ನು ಏಕಕಾಲದಲ್ಲಿ ಖಾಲಿ ಮಾಡಬೇಕು. ಅವುಗಳನ್ನು ಉಜ್ಜಿ ತೊಳೆದು ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ನಂತರ ನೀರು ಶೇಖರಣೆ ಮಾಡಬೇಕು. ಈ ರೀತಿ ಒಣಗಿಸದೇ ಇದ್ದಲ್ಲಿ ಲಾರ್ವಾ ಗಳು ನೀರಿನ ಸಂಗ್ರಹದ ತೊಟ್ಟಿಯ ಅಥವಾ ಡ್ರಂಗಳ ಒಳಭಾಗದಲ್ಲಿ ಅಂಟಿಕೊಂಡು ಅವು ಸಾಯುವುದಿಲ್ಲ. ಚೆನ್ನಾಗಿ ಒಣಗಿಸಿದ್ದಲ್ಲಿ ಮಾತ್ರ ಸಾಯುತ್ತವೆ ಎಂದರು.

ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಇತರೆ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಸೊಳ್ಳೆ ನಿಯಂತ್ರಣ ಕ್ರಮಗಳಾದ ಲಾರ್ವಾ ನಾಶಕ್ಕೆ ಕೈಜೋಡಿಸಬೇಕು. ಜನಪ್ರತಿನಿಧಿಗಳು ಸಹ ಜನರಲ್ಲಿ ಜಾಗೃತಿ ಮೂಡಿಸ ಬೇಕು. ದೈನಂದಿನ ದಿನಗಳಲ್ಲಿ ಮನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡುವ ಮೂಲಕ ನಮ್ಮ ಸುತ್ತಮುತ್ತಲಿನ ಜಾಗವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ ಗಡಾದ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ, ತಾಲೂಕು ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆ ಯರು, ಸಾರ್ವಜನಿಕರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News