ಮುಂಜಾಗ್ರತಾ ಕ್ರಮ ಪಾಲನೆ ಮಾಡಿದಲ್ಲಿ ಡೆಂಗಿ ನಿಯಂತ್ರಿಸಲು ಸಾಧ್ಯ: ಉಡುಪಿ ಜಿಲ್ಲಾಧಿಕಾರಿ

Update: 2024-07-05 16:01 GMT

ಉಡುಪಿ, ಜು.5: ಜನಸಾಮಾನ್ಯರು ಡೆಂಗಿ ಜ್ವರ ನಿಯಂತ್ರಣಕ್ಕೆ ಇರುವ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅರಿತು ಅವುಗಳನ್ನು ಪಾಲನೆ ಮಾಡಿದಲ್ಲಿ ಮಾತ್ರ ಜಿಲ್ಲೆಯಲ್ಲಿ ಡೆಂಗಿಯನ್ನು ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.

ದಿನೇದಿನೇ ಉಲ್ಭಣಗೊಳ್ಳುತ್ತಿರುವ ಡೆಂಗಿ ರೋಗ ನಿಯಂತ್ರಣ ಹಾಗೂ ನಿರ್ಮೂಲನೆಗಾಗಿ ಜನಜಾಗೃತಿ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಪ್ರತೀ ಶುಕ್ರವಾರ ಸೊಳ್ಳೆ ನಿರ್ಮೂಲನಾ ದಿನವಾಗಿ ಭಿನ್ನ ಕಾರ್ಯಕ್ರಮಗಳ ಮೂಲಕ ಆಚರಿಸಲಿದ್ದು, ಇದರ ಅಂಗವಾಗಿ ಇಂದು ಉಡುಪಿ ತಾಲೂಕಿನ ಕೊಡಂ ಕೂರು ವಾರ್ಡಿನ ಪ್ರಮೋದ್ ಬಡಾವಣೆಯಲ್ಲಿ ಮನೆಮನೆಗೆ ತೆರಳಿ ಡೆಂಗಿ ಜಾಗೃತಿ ಕರಪತ್ರ ವಿತರಿಸುವ ಹಾಗೂ ಸಾರ್ವಜನಿಕರನ್ನು ಸಂದರ್ಶಿಸುವ ಮೂಲಕ ಡೆಂಗಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿ, ಜಿಲ್ಲೆಯ ಜನರು ಡೆಂಗಿ ನಿಯಂತ್ರಣದ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇದರ ನಿಯಂತ್ರಣದ ಬಗ್ಗೆ ತಿಳುವಳಿಕೆ ಹೊಂದುವುದರೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಡೆಂಗಿಯನ್ನು ನಿಯಂತ್ರಿಸಿ, ನಿರ್ಮೂಲನೆ ಮಾಡಲು ಮುಂದಾಗಬೇಕು ಎಂದರು.

ವಾರ್ಡಿನ ಮನೆ ಮನೆಗೆ ಭೇಟಿ: ಡೆಂಗಿ ಜನಜಾಗೃತಿ ಹಾಗೂ ಪ್ರತೀ ಶುಕ್ರವಾರವನ್ನು ಈಡಿಸ್ ಸೊಳ್ಳೆ ನಿರ್ಮೂಲನಾ ಶುಕ್ರವಾರವಾಗಿ ಆಚರಿಸುತ್ತಿದ್ದು, ಇದರ ಅಂಗವಾಗಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಪ್ರಮೋದ್ ಬಡಾವಣೆಯಲ್ಲಿ ಮನೆ ಮನೆಗಳಿಗೆ ತೆರಳಿ ಡೆಂಗಿ ನಿಯಂತ್ರಣ ಮಾಹಿತಿಯ ಕರಪತ್ರಗಳನ್ನು ವಿತರಿಸುವ ಜೊತೆಗೆ ಸ್ಥಳೀಯ ನಿವಾಸಿಗಳಾದ ಅಂಜನಮ್ಮ, ಲಕ್ಷ್ಮೀ, ಮಂಜುಳಾ, ಸವಿತಾ ಸೇರಿದಂತೆ ಅನೇಕ ಸ್ಥಳೀಯ ಗೃಹಿಣಿಯರಿಗೆ ಮನೆಯಲ್ಲಿನ ಲಾರ್ವಾ ನಾಶದ ಬಗ್ಗೆ ಹಾಗೂ ಈಡಿಸ್ ಸೊಳ್ಳೆಗಳ ಉತ್ಪತ್ತಿ ಕುರಿತು ಜಿಲ್ಲಾಧಿಕಾರಿಗಳು ಸ್ವತಹ ಮಾಹಿತಿಗಳನ್ನು ನೀಡಿದರು.

ಇದೇ ಸಂದರ್ಭದಲ್ಲಿ ಮನೆ ಮುಂದೆ ಶೇಖರಿಸಿದ ನೀರಿಗೆ ಬ್ಯಾಟರಿ ಹಾಕಿ ಲಾರ್ವಾ ಇರುವ ಬಗ್ಗೆ ಸಹ ಪರಿಶೀಲನೆ ನಡೆಸಿದರು ಹಾಗೂ ಕಾಲೋನಿಯ ಕೇರಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ನಿಂತ ಮಳೆಯ ನೀರಿಗೆ ಆರೋಗ್ಯ ಹಾಗೂ ನಗರಸಭಾ ಸಿಬ್ಬಂದಿಗಳು ರಾಸಾಯನಿಕ ಸಿಂಪರಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ ಗಡಾದ್, ಪೌರಾಯುಕ್ತ ರಾಯಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ತಾಲೂಕು ವೈದ್ಯಾಧಿಕಾರಿ ಡಾ. ವಾಸುದೇವ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News