ಪೆರ್ನೆಮ್ ಸುರಂಗದೊಳಗೆ ನೀರು: ಕೊಂಕಣ ರೈಲು ಸಂಚಾರ ವ್ಯತ್ಯಯ; ಹಲವು ರೈಲುಗಳ ಸಂಚಾರ ರದ್ದು

Update: 2024-07-10 13:23 GMT

ಉಡುಪಿ, ಜು.10: ಕೊಂಕಣ ರೈಲು ಮಾರ್ಗದ ಕಾರವಾರ ವಲಯದ ಮದುರೆ-ಪೆರ್ನೆಮ್ ವಿಭಾಗದ ಪೆರ್ನೆಮ್ ಸುರಂಗ ಮಾರ್ಗದಲ್ಲಿ ಮಂಗಳವಾರ ಅಪರಾಹ್ನದ ವೇಳೆಗೆ ಕಾಣಿಸಿಕೊಂಡ ಮಳೆ ನೀರಿನ ಸೋರಿಕೆ, ದುರಸ್ತಿಯ ಹೊರತಾಗಿಯೂ ಇಂದು ಮುಂಜಾನೆ 2:19ರ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಮತ್ತೆ ಸೋರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಹೀಗಾಗಿ ಇಂದು ಮುಂಜಾನೆಯಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಸಾಕಷ್ಟು ರೈಲುಗಳ ಪ್ರಯಾಣವನ್ನು ರದ್ದುಗೊಳಿಸಿದ್ದರೆ, ದೂರ ಪ್ರಯಾಣದ ರೈಲುಗಳ ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿವೆ.

ಮಂಗಳವಾರ ಅಪರಾಹ್ನ 2:30ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಮಳೆಯ ಕೆಸರು ನೀರಿನ ಸೋರಿಕೆಯನ್ನು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ತಂತ್ರಜ್ಞರು ದುರಸ್ಥಿಗೊಳಿಸಿದ್ದು, ರಾತ್ರಿ 10:10ರ ಸುಮಾರಿಗೆ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಇಂದು ಮುಂಜಾನೆ 2:59ರ ಸುಮಾರಿಗೆ ದೊಡ್ಡ ಪ್ರಮಾಣದಲ್ಲಿ ಕೆಸರು ನೀರು ರೈಲು ಹಳಿಗಳ ಮೇಲೆ ಬೀಳಲಾರಂಭಿಸಿದ ಬಳಿಕ ರೈಲು ಸಂಚಾರವನ್ನು ಸ್ಥಗಿತಗೊಳಿ ಸಲಾಯಿತು.

ಇದೀಗ ಗೋವಾ ಹಾಗೂ ಮುಂಬೈಯಿಂದ ಆಗಮಿಸಿದ ತಂತ್ರಜ್ಞರು, ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ದುರಸ್ಥಿ ಕಾರ್ಯ ಭರದಿಂದ ನಡೆಯುತಿದ್ದು, ಇಂದು ರಾತ್ರಿ 8-9 ಗಂಟೆಯ ಸುಮಾರಿಗೆ ಇದು ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ ಎಂದು ಕೊಂಕಣ ರೈಲ್ವೆಯ ಮೂಲಗಳು ತಿಳಿಸಿವೆ.

ಈ ನಡುವೆ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ. ಕೇರಳದಿಂದ ಆಗಮಿಸುವ ಹಾಗೂ ಅಲ್ಲಿಗೆ ಸಾಗುವ ದೂರ ಪ್ರಯಾಣದ ಕೆಲವು ರೈಲುಗಳ ಸಂಚಾರದ ಮಾರ್ಗವನ್ನು ಬದಲಿಸಲಾಗಿದೆ.

ಮಂಗಳೂರು ರೈಲು ರದ್ದು: ರೈಲು ನಂ.12620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ನಡುವಿನ ಬುಧವಾರದ ಸಂಚಾರವನ್ನು ರದ್ದು ಪಡಿಸಲಾಗಿದೆ. ಅದೇ ರೀತಿ ರೈಲು 12134 ಮಂಗಳೂರು ಜಂಕ್ಷನ್- ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲಿನ ಇಂದಿನ ಪ್ರಯಾಣ ಸಂಪೂರ್ಣ ರದ್ದಾಗಿದೆ.

ಮಂಗಳವಾರ ತನ್ನ ಪ್ರಯಾಣ ಪ್ರಾರಂಭಿಸಿದ್ದ ರೈಲು ನಂ.12619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಸಾವಂತವಾಡಿ ರೋಡ್ ನಿಲ್ದಾಣದಲ್ಲೇ ಕೊನೆ ಗೊಳಿಸಲಾಗಿದೆ.ಹೀಗಾಗಿ ಸಾವಂತವಾಡಿ ರೋಡ್-ಮಂಗಳೂರು ಸೆಂಟ್ರಲ್ ವರೆಗಿನ ಪ್ರಯಾಣವನ್ನು ರದ್ದುಪಡಿಸಲಾಗಿದೆ.

ಅದೇ ರೀತಿ ನಿನ್ನೆ ಪ್ರಯಾಣ ಪಾರಂಭಿಸಿ ಕರ್ಮಾಲಿವರೆಗೆ ಬಂದಿದ್ದ ರೈಲು ನಂ.12134 ಮಂಗಳೂರು ಜಂಕ್ಷನ್-ಮುಂಬೈ ಸಿಎಸ್‌ಎಂಟಿ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ಅಲ್ಲಿಗೆ ನಿಲ್ಲಿಸಿ ಅದನ್ನು ಮಡಗಾಂವ್, ಲೋಂಡಾ, ಮೀರಜ್, ಪುಣೆ, ಪನ್ವೇಲ್ ಮಾರ್ಗದಲ್ಲಿ ಕಳುಹಿಸಲಾಗಿದೆ.

ರೈಲು ನಂ.12619 ಲೋಕಮಾನ್ಯ ತಿಲಕ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನ ಬುಧವಾರದ ಸಂಚಾರ ರದ್ದುಗೊಂಡಿದೆ. ರೈಲು ನಂ. 12133 ಮುಂಬೈ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವೂ ರದ್ದಾಗಿದೆ.

ಮುಂಬೈ ಸಿಎಸ್‌ಎಂಟಿ- ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇರಿದಂತೆ ಎರಡೂ ನಿಲ್ದಾಣಗಳ ನಡುವೆ ಎರಡೂ ಬದಿಯಿಂದ ಸಂಚರಿಸುವ ಹೆಚ್ಚಿನೆಲ್ಲಾ ರೈಲುಗಳ ಇಂದಿನ ಪ್ರಯಾಣವನ್ನು ರದ್ದು ಪಡಿಸಲಾಗಿದೆ.

ನಿನ್ನೆ ಪ್ರಯಾಣ ಪ್ರಾರಂಭಿಸಿದ್ದ ಎಚ್.ನಿಝಾಮುದ್ದೀನ್- ಎರ್ನಾಕುಲಂ ಜಂಕ್ಷನ್ ನಡುವಿನ ಮಂಗಳಾ ಎಕ್ಸ್‌ಪ್ರೆಸ್ ರೈಲು ಇದೀಗ ಪನ್ವೇಲ್, ಲೋನಾವಾಲಾ, ಪುಣೆ, ಮೀರಜ್, ಲೋಂಡಾ, ಮಡಗಾಂವ್ ಮಾರ್ಗವಾಗಿ ಸಂಚರಿಸುತ್ತಿದೆ.

ಮಂಗಳವಾರ ಪ್ರಯಾಣ ಪ್ರಾರಂಭಿಸಿದ್ದ ತಿರುನಲ್ವೇಲಿ-ಜಾಮ್‌ನಗರ್ ಎಕ್ಸ್‌ಪ್ರೆಸ್ ರೈಲನ್ನು ಕುಮಟದಲ್ಲಿ ನಿಲ್ಲಿಸಿ, ಅದನ್ನು ಶೋರನೂರು ಜಂಕ್ಷನ್, ಈರೋಡ್ ಜಂಕ್ಷನ್, ಧರ್ಮಾವರಂ, ಗುಂಟಕಲ್ ಜಂಕ್ಷನ್, ರಾಯಚೂರು, ವಾಡಿ, ಸೋಲಾಪುರ ಜಂಕ್ಷನ್, ಪುಣೆ ಜಂಕ್ಷನ್, ಲೋನಾವಾಲ, ಪನ್ವೇಲ್ ಮಾರ್ಗವಾಗಿ ಕಳುಹಿಸಲಾಗಿದೆ.

ಉಡುಪಿಯವರೆಗೆ ಬಂದಿರುವ ನಾಗರಕೋಯಿಲ್-ಗಾಂಧೀಧಾಮ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಿಸಿ ಶೋರನೂರು ಜಂಕ್ಷನ್, ಈರೋಡ್ ಜಂಕ್ಷನ್, ಧರ್ಮಾವರಂ, ಗುಂಟಕಲ್ ಜಂಕ್ಷನ್, ರಾಯಚೂರು, ವಾಡಿ, ಸೋಲಾಪುರ ಜಂಕ್ಷನ್, ಪುಣೆ ಜಂಕ್ಷನ್, ಲೋನಾವಾಲ, ಪನ್ವೇಲ್ ಮಾರ್ಗ ವಾಗಿ ಮುಂದಕ್ಕೆ ಕಳುಹಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಅದೇ ರೀತಿ ಮಂಗಳೂರು ಜೋಕಟ್ಟೆವರೆಗೆ ಬಂದಿರುವ ಎರ್ನಾಕುಲಂ- ಎಚ್.ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲು, ತಿರುವನಂತಪುರ ಸೆಂಟ್ರಲ್- ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್, ಲೋಕಮಾನ್ಯ ತಿಲಕ್- ತಿರುವನಂತಪುರ ಸೆಂಟ್ರಲ್ ಎಕ್ಸ್‌ಪ್ರೆಸ್, ಲೋಕಮಾನ್ಯ ತಿಲಕ್- ಕೊಚ್ಚುವೇಲು ಎಕ್ಸ್‌ಪ್ರೆಸ್ ರೈಲು, ಎಚ್.ನಿಝಾಮುದ್ದೀನ್-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್, ಭಾವನಗರ್- ಕೊಚ್ಚುವೇಲು ಎಕ್ಸ್‌ಪ್ರೆಸ್, ಲೋಕಮಾನ್ಯ ತಿಲಕ್- ಎರ್ನಾಕುಲಂ ಎಕ್ಸ್‌ಪ್ರೆಸ್, ಇಂದೋರ್ ಜಂಕ್ಷನ್- ಕೊಚ್ಚುವೇಲ್ ಎಕ್ಸ್‌ಪ್ರೆಸ್, ಎರ್ನಾಕುಲಂ ಜಂಕ್ಷನ್- ಪುಣೆ ಜಂಕ್ಷನ್ ಎಕ್ಸ್‌ಪ್ರೆಸ್ ಹಾಗೂ ಕೇರಳದತ್ತ ಸಾಗುವ ಹಾಗೂ ಬರುವ ಇನ್ನಷ್ಟು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಿ ಕಳುಹಿಸಲಾಗುತ್ತಿದೆ ಎಂದು ಪ್ರಕಟಣೆ ವಿವರಿಸಿದೆ.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News