ಕಾರ್ಮಿಕರ ನೂತನ ಸಂಹಿತೆ ಜಾರಿ ವಿರೋಧಿಸಿ ಮನವಿ

Update: 2024-07-10 13:58 GMT

ಕುಂದಾಪುರ, ಜು.10: ಕೇಂದ್ರ ಸರಕಾರವು ಕರೋನ ಲಾಕ್‌ಡೌನ್ ಸಂಧರ್ಭದಲ್ಲಿ ಜಾರಿಗೆ ತಂದ ನೂತನ ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡ ಬಾರದು ಎಂದು ಆಗ್ರಹಿಸಿ ಸಿಐಟಿಯು ಇಂದು ಕುಂದಾಪುರ ತಹಸಿಲ್ದಾರ್ ಮೂವಕ ಕೇಂದ್ರ ಸರಕಾರ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ, ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು. ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಾಸ್ಸು ಪಡೆಯಬೇಕು. ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿ ಪಡಿಸಬೇಕು. ಎಪಿಎಂಸಿ ವ್ಯವಸ್ಥೆಯನ್ನು ಬಲಗೊಳಿಸಬೇಕು. ಗೊಬ್ಬರ ಒಳಗೊಂಡಂತೆ ಕೃಷಿ ಇಡುವಳಿಗಳಿಗೆ ಸಬ್ಸಿಡಿ ಕಡಿತ ಗೊಳಿಸುವ ನೀತಿಗಳನ್ನು ಕೈಬಿಡಬೇಕು.

ದೇಶದ ಐಕ್ಯತೆಯನ್ನು ಛಿದ್ರಗೊಳಿಸುವ, ಸೌಹಾರ್ದತೆಯನ್ನು ಹಾಳು ಮಾಡುವ ಕೃತ್ಯಗಳನ್ನು ಹಾಗು ಶಕ್ತಿಗಳನ್ನು ನಿಗ್ರಹಿಸ ಬೇಕು. ಸಂವಿಧಾನದ ಧರ್ಮ ನಿರಪೇಕ್ಷ ಮೌಲ್ಯಗಳನ್ನು ಸಂರಕ್ಷಿಸಬೇಕು. ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು. ಶಿಕ್ಷಣವನ್ನು ದುಬಾರಿಗೊಳಿಸುವ ಹಾಗು ಅವೈಜ್ಞಾನಿಕ ಹೊಸ ನಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು.

ಕನಿಷ್ಠ ಕೂಲಿ ಅಕುಶಲ ಕಾರ್ಮಿಕರಿಗೆ 31000ರೂ. ನಿಗದಿ, ಬಿಸಿಯೂಟ ನೌಕರರಿಗೆ ಬದುಕುಳಿಯುವ ವೇತನ ನೀಡ ಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಬಾಕಿ ಇರುವ ಶೈಕ್ಷಣಿಕ ಧನಸಹಾಯ ಮಂಜೂರು ಮಾಡಬೇಕು. ರೈತ ವಿರೋಧಿ ಕೃಷಿ ಕಾನೂನು ರದ್ದು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಸಂಚಾಲಕ ಚಂದ್ರಶೇಖರ ವಿ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News