ಡೆಂಗಿಯಂಥ ರೋಗ ಹರಡದಂತೆ ಸ್ವಚ್ಚತೆ ಕಾಪಾಡಿ: ಡಾ.ಪ್ರಶಾಂತ್ ಭಟ್

Update: 2024-07-10 15:11 GMT

ಮಲ್ಪೆ, ಜು.10: ಡೆಂಗಿ, ಮಲೇರಿಯಾ, ಮೆದುಳು ಜ್ವರದಂಥ ರೋಗ ಗಳನ್ನು ಹರಡುವ ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿಯೊಬ್ಬರು ತಮ್ಮ ಆರೋಗ್ಯದ ಕುರಿತಂತೆ ಹೆಚ್ಚು ಕಾಳಜಿಯನ್ನು ಹೊಂದಿರಬೇಕು ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್ ಹೇಳಿದ್ದಾರೆ.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಬೋಟ್ ಮಾಲಕರು, ಮೀನು ಗಾರರು, ಮಹಿಳಾ ಮೀನುಗಾರ ಸಂಘ, ಕೊಚ್ಚಿನ್ ಶಿಪ್ ಯಾರ್ಡ್ ಉಡುಪಿ ಹಾಗೂ ಬಂದರಿನಲ್ಲಿರುವ ವಿವಿಧ ಇತರೆ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ಡೆಂಗಿ, ಮಲೇರಿಯಾ, ಚಿಕುನ್ಯಗುನ್ಯಾ, ಮೆದುಳುಜ್ವರ ಹರಡುವ ಬಗ್ಗೆ ಮುಂಜಾಗ್ರತ ಕ್ರಮ ಕೈಕೊಳ್ಳುವ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇದೀಗ ರಾಜ್ಯ ಆರೋಗ್ಯ ಸಚಿವರು ಮತ್ತು ಆರೋಗ್ಯ ನಿರ್ದೇಶಾನಲಯ ಆದೇಶದಂತೆ ಪ್ರತಿ ಶುಕ್ರವಾರ ‘ಡ್ರೈ ಡೇ’-ನೀರು ಒಣಗಿಸುವ ದಿನ- ಆಚರಿಸುವಲ್ಲಿ ಪ್ರತಿಯೊಬ್ಬರು ಮುತುವರ್ಜಿ ವಹಿಸಬೇಕು ಎಂದವರು ಸಲಹೆ ನೀಡಿದರು.

ಬೋಟ್ ಮಾಲಕರು ಬೋಟ್‌ನಲ್ಲಿ ಅಳವಡಿಸುವ ಟೈಯರ್‌ನಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಆಗುವುದರಿಂದ ಟೈಯರ್ ಬದಲಿಗೆ ರೋಪ್ (ಹಗ್ಗ) ನ್ನು ಅಳವಡಿಸಬೇಕು. ಬೋಟ್‌ನಲ್ಲಿ ಉಪಯೋಗಿಸುವ ಬ್ಯಾರೆಲ್‌ಗಳನ್ನು ಮಗುಚಿ ಹಾಕಬೇಕು ಮತ್ತು ಬಂದರಿನ ಸುತ್ತಮುತ್ತ ನೀರು ನಿಲ್ಲದಂತೆ ಬಂದರಿನ ಪರಿಸರ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು.

ಒಳನಾಡು ಮತ್ತು ಬಂದರು ಇಲಾಖೆಗೆ ಸಂಬಂಧ ಪಟ್ಟಂತಹ ಜಾಗದಲ್ಲಿ ಒಣಮೀನು ತಯಾರಿಸುವ ಸಿಮೆಂಟ್ ತೊಟ್ಟಿಗಳಿಗೆ ಮುಚ್ಚಳ ಅಥವಾ ತಾಡಪಲ್ ಅಳವಡಿಸುವಂತೆ ಮಹಿಳಾ ಮೀನುಗಾರರಿಗೆ ಡಾ.ಪ್ರಶಾಂತ್ ಭಟ್ ಸಲಹೆ ನೀಡಿದರು.

ಸಭೆಯಲ್ಲಿ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಾತನಾಡಿ, ಶೇ.90%ರಷ್ಟು ಬೋಟ್‌ ಗಳಿಗೆ ಟೈಯರ್ ತೆಗೆದು ರೋಪ್ ಹಾಕಿದ್ದು, ಇನ್ನೂ ಉಳಿದ ಬೋಟ್‌ಗಳಿಗೂ ರೋಪ್ ಅಳವಡಿಸುವಂತೆ ಸಂಘದ ಮುಖಾಂತರ ಮಾಲಕರಿಗೆ ಮಾಹಿತಿ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ನಗರಸಭಾ ಪೌರಯುಕ್ತ ರಾಯಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೀನು ಗಾರಿಕೆ ಜಂಟಿ ನಿರ್ದೇಶಕ ವಿವೇಕ್, ಮೀನುಗಾರಿಕೆ ಉಪ ನಿರ್ದೇಶಕ ಸವಿತಾ ಖಾದ್ರಿ ಎಸ್.ಕೆ, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೇಷ್ಮಾ, ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಎನ್., ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News