ನಾಡ್ಪಾಲು ಗ್ರಾಮದಲ್ಲಿ ಆನೆ ಪ್ರತ್ಯಕ್ಷ| ಅಪಾರ ಕೃಷಿ ಬೆಳೆಗಳಿಗೆ ಹಾನಿ: ಅರಣ್ಯಾಧಿಕಾರಿಗಳಿಂದ ಪರಿಶೀಲನೆ

Update: 2024-07-10 15:27 GMT

ಹೆಬ್ರಿ, ಜು.10: ಸೋಮೇಶ್ವರ ಅಭಯಾರಣ್ಯದಲ್ಲಿರುವ ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾ ತಿಂಗಳೆ ಪರಿಸರದಲ್ಲಿ ಆನೆಯೊಂದು ಕಾಣಿಸಿ ಕೊಂಡಿದೆ. ಎರಡು ದಿನಗಳ ಹಿಂದೆ ಈ ಆನೆ ತೋಟ, ಗದ್ದೆಗಳಿಗೆ ದಾಳಿ ನಡೆಸಿದ ಪರಿಣಾಮ ಅಪಾರ ಬೆಳೆಗಳು ಹಾನಿಯಾಗಿರುವ ಬಗ್ಗೆ ವರದಿ ಯಾಗಿದೆ.

ಒಂದು ವರ್ಷಗಳ ಹಿಂದೆ ಕುದುರೆಮುಖ ಕೆರೆಕಟ್ಟೆ ಕಡೆಯಿಂದ ಬಂದು ಸೋಮೇಶ್ವರ ಅಭಯಾರಣ್ಯವನ್ನು ಸೇರಿಕೊಂಡಿ ರುವ ಆನೆಯು ಬಡಾ ತಿಂಗಳೆ ಪರಿಸರದ ಸುಮಾರು ಆರು ಕುಟುಂಬಗಳ ತೋಟ, ಗದ್ದೆಗಳಿಗೆ ನುಗ್ಗಿದೆ ಎನ್ನ ಲಾಗಿದೆ. ಇದರಿಂದ ಅಡಿಕೆ, ಭತ್ತ, ತೆಂಗು ಸೇರಿದಂತೆ ವಿವಿಧ ಬೆಳೆಗಳು ಹಾನಿ ಯಾಗಿವೆ ಎಂದು ತಿಳಿದುಬಂದಿದೆ.

‘ಈ ಆನೆ ನಾಲ್ಕೈದು ದಿನಗಳಿಂದ ಇಲ್ಲೇ ತಿರುಗಾಡುತ್ತಿದೆ. ಮೊನ್ನೆ ರಾತ್ರಿ 2.40ರ ಸುಮಾರಿಗೆ ಬಂದು ಅಡಿಕೆ ಸಸಿ, ಪೈಪ್‌ಲೈನ್‌ಗಳನ್ನು ಮುರಿದು ಹಾಕಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶಬ್ದ ಕೇಳಿ ಹೊರಗಡೆ ಬಂದಾಗ ಗದ್ದೆಯಲ್ಲಿ ಓಡಾಡುತ್ತಿತ್ತು. ಗದ್ದೆಯನ್ನು ಸಂಪೂರ್ಣ ಹಾಳು ಮಾಡಿ ಬಿಟ್ಟಿದೆ. ಅದೇ ರೀತಿ ಬಾಳೆಗಳನ್ನು ಕಿತ್ತು ತಿಂದಿದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸುಮಾರು 15-20 ವರ್ಷ ವಯಸ್ಸಿನ ಈ ಆನೆ ದಾಳಿಯಿಂದ ನಾಡ್ಪಾಲು ಗ್ರಾಪಂ ವ್ಯಾಪ್ತಿಯ ಬಡಾ ತಿಂಗಳೆ, ಮೇಗದ್ದೆ, ಬಿಡಾರು, ಪಜ್ಜೊಳ್ಳಿ ಗ್ರಾಮದ ಜನತೆ ತೀರಾ ಭೀತಿಗೆ ಒಳಗಾಗಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೇ ಕಾರ್ಯಾಚರಣೆ ನಡೆಸುವ ಮೂಲಕ ಆನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಕಾರ್ಕಳ ವನ್ಯ ಜೀವಿ ವಿಭಾಗದ ಉಪ ವಲಯ ಸಂರಕ್ಷಣಾಧಿ ಕಾರಿ ಶಿವರಾಮ ಬಾಬು, ಹೆಬ್ರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಗೌರವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆ ದಾಳಿಯ ಹಿನ್ನೆಲೆಯಲ್ಲಿ ಈ ಗ್ರಾಮದಲ್ಲಿ ಇಲಾಖೆ ಸಿಬ್ಬಂದಿಗಳನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿದೆ.

‘ಈ ಆನೆಯು ಕಳೆದ ಒಂದು ವರ್ಷಗಳಿಂದ ಕಾಡಿನೊಳಗೆ ಇದೆ. ಆದರೆ ಯಾರಿಗೂ ಯಾವುದೇ ಹಾನಿ ಮಾಡಿರಲಿಲ್ಲ. ಇತ್ತೀಚೆಗೆ ಅದು ತಿರುಗಾಡಲು ಆರಂಭಿಸಿದೆ. ಮಳೆ ಜೋರಾಗಿರುವುದರಿಂದ ಮತ್ತೆ ನಾಡಿನತ್ತ ವಾಪಾಸ್ಸು ಬಂದಿದೆ. ಹಲಸಿನ ಹಣ್ಣಿನ ಸುವಾಸನೆಗೆ ಅದು ಹಲಸಿನ ಮರಗಳು ಇರುವಲ್ಲಿಗೆ ಹೋಗಿದೆ. ಈ ವೇಳೆ ಕೃಷಿ ಬೆಳೆ ಹಾನಿಯಾಗಿದ್ದು, ಆ ಆರು ಕುಟುಂಬಗಳಿಗೆ ಇಲಾಖೆಯಿಂದ ಪರಿಹಾರ ನೀಡುವ ಕಾರ್ಯ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಗೌರವ್ ತಿಳಿಸಿದ್ದಾರೆ.

ಶಾಲಾ ಮಕ್ಕಳಿಗೆ ಜೀಪಿನ ವ್ಯವಸ್ಥೆ!

ಆನೆ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಇಲ್ಲಿನ ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗಲು ಭೀತಿ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಮಕ್ಕಳು ಬೆಳಗ್ಗೆ ಮತ್ತು ಸಂಜೆ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ಇಲಾಖೆಯಿಂದ ಜೀಪಿನ ವ್ಯವಸ್ಥೆ ಮಾಡಲಾಗಿದೆ.

ಮೇಗದ್ದೆ, ಬಿಡಾರು, ಪಜ್ಜೊಳ್ಳಿ ಗ್ರಾಮಗಳ ಸುಮಾರು 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಇಲಾಖೆಯ ಎರಡು ಜೀಪಿಗಳಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆ ನೆಲ್ಲಿಕಟ್ಟೆಯವರೆಗೆ ಬಿಟ್ಟು ಕರೆದುಕೊಂಡು ಬರಲಾಗುತ್ತದೆ. ಅಲ್ಲಿಂದ ಮಕ್ಕಳು ಬಸ್ಸಿನಲ್ಲಿ ತಮ್ಮ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News