ಮೊದಲು ಸಿನಿಮಾ ನೋಡಿ, ಬಳಿಕ ಆ ಬಗ್ಗೆ ಮಾತನಾಡಿ ವಿವಾದದ ಕುರಿತು ‘ಕಲ್ಜಿಗ’ ಚಿತ್ರ ತಂಡದ ಮನವಿ

Update: 2024-09-17 15:46 GMT

ಉಡುಪಿ, ಸೆ.17: ಈಗ ಯಶಸ್ವಿಯಾಗಿ ನಡೆಯುತ್ತಿರುವ ‘ಕಲ್ಜಿಗ’ ಚಿತ್ರದ ಕುರಿತಂತೆ ಆಕ್ಷೇಪ ವ್ಯಕ್ತಪಡಿಸುವವರು ಮೊದಲು ಚಿತ್ರವನ್ನು ವೀಕ್ಷಿಸಿ. ಬಳಿಕ ತಮ್ಮ ಅಭಿಪ್ರಾಯವನ್ನೋ, ವಿರೋಧವನ್ನೋ ವ್ಯಕ್ತಪಡಿಸಿ. ಚಲನಚಿತ್ರದ ಒಂದು ಸನ್ನಿವೇಶ ವನ್ನು ಹಿಡಿದು ಮಾತನಾಡುವುದು ತಪ್ಪಾಗುತ್ತದೆ ಎಂದು ಇದೀಗ ವಿವಾದಕ್ಕೆ ಗುರಿಯಾಗಿರುವ ಕನ್ನಡ ಚಲನಚಿತ್ರ ‘ಕಲ್ಜಿಗ’ ಚಿತ್ರ ತಂಡ ಮನವಿ ಮಾಡಿದೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಸುಮನ್ ಸುವರ್ಣ ಅವರು, ಸೆ.13 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ಚಿತ್ರಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈವರೆಗೆ 15,000ಕ್ಕೂ ಅಧಿಕ ಮಂದಿ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಡೀ ಕುಟುಂಬವೇ ನೋಡಬಹುದಾದ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಇಂಥ ಚಿತ್ರ ಹೆಚ್ಚು ಹೆಚ್ಚು ಬರಬೇಕು ಎಂದವರು ಪ್ರತಿಕ್ರಿಯಿಸಿದ್ದಾರೆ ಎಂದರು.

ಹೀಗಾಗಿ ಚಿತ್ರ ಇನ್ನೂ ಅಧಿಕ ಮಂದಿಯನ್ನು ತಲುಪಲು ಸಾಧ್ಯವಾಗುವಂತೆ ನಾವು ಪ್ರಯತ್ನದಲ್ಲಿದ್ದೇವೆ. ದೂರ ಮುಂಬಯಿ ಹಾಗೂ ಕೊಲ್ಲಿ ರಾಷ್ಟ್ರಗಳಿಂದಲೂ ಚಿತ್ರದ ಪ್ರದರ್ಶನಕ್ಕೆ ಕೋರಿಕೆ ಬರುತ್ತಿದೆ. ಚಿತ್ರದಲ್ಲಿ ದೈವಾರಾಧನೆಯನ್ನು ಬಳಸಿದ್ದಕ್ಕೆ ಕೆಲವೇ ಕೆಲವರು ಆಕ್ಷೇಪ ವ್ಯಕ್ತಪಡಿಸು ತಿದ್ದಾರೆ. ಆದರೆ ಖುದ್ದಾಗಿ ಚಿತ್ರ ನೋಡಿದ ಯಾರಿಂದಲೂ ಯಾವುದೇ ಆಕ್ಷೇಪವಾ ಗಲಿ, ವಿರೋಧವಾಗಲಿ ಕೇಳಿಬಂದಿಲ್ಲ ಎಂದರು.

ಚಿತ್ರದ ನಿರ್ಮಾಪಕ ಶರತ್‌ಕುಮಾರ್ ಮಾತನಾಡಿ, ಉಡುಪಿಯಲ್ಲಿ ಚಿತ್ರ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ. ಧರ್ಮ ಹಾಗೂ ಸತ್ಯದ ದಾರಿಯಲ್ಲಿ ನಡೆಯ ಬೇಕಾದ ಅಗತ್ಯವನ್ನು ಚಿತ್ರ ಸಾರಿಹೇಳುತ್ತಿದೆ ಎಂದು ಪ್ರತಿಯೊಬ್ಬರೂ ಹೊಗಳುತಿದ್ದಾರೆ. ನಾವು ಜನರಿಗಾಗಿ ಚಿತ್ರ ಮಾಡಿದ್ದೇವೆ. ಅವರನ್ನು ತಲುಪುವುದು ನಮಗೆ ಅಗತ್ಯ ಎಂದರು.

ಚಿತ್ರದ ನಾಯಕ ಅರ್ಜುನ ಕಾಪಿಕಾಡ್ ಮಾತನಾಡಿ, ಚಿತ್ರ ಅದ್ಭುತವಾಗಿ ಬಂದಿದೆ ಎಂದೇ ಎಲ್ಲರೂ ಪ್ರಶಂಸಿಸುತಿದ್ದಾರೆ. ಕನ್ನಡ ಚಿತ್ರವಾದರೂ, ಸೂಕ್ತ ಟೈಟಲ್‌ಗಾಗಿ ತುಳು ಶಬ್ದವನ್ನು ಬಳಸಿದ್ದೇವೆ. ಚಿತ್ರದ ಬಗ್ಗೆ ಆಕ್ಷೇಪಿಸುವವರು ಮೊದಲು ಚಿತ್ರವನ್ನು ನೋಡಿ. ಆಗ ನಿಮಗೆ ಎಲ್ಲವೂ ಮನದಟ್ಟಾಗುತ್ತದೆ ಎಂದರು.

ವಿವಾದವೇದ್ದಿದ್ದರಿಂದ ಚಿತ್ರ ನೋಡಲು ಜನ ಥಿಯೇಟರ್‌ಗೆ ಬರುತ್ತಿದ್ದಾರಾ ಎಂದು ಅವರನ್ನು ಪ್ರಶ್ನಿಸಿದಾಗ, ಕೆಲವರ ಆಕ್ಷೇಪದಿಂದ ಕುತೂಹಲಗೊಂಡು ಕೆಲವು ಚಿತ್ರ ನೋಡಲು ಬರುತ್ತಿರಬಹುದು ಎಂದ ಅವರು ಎಲ್ಲರ ಆಕ್ಷೇಪ, ವಿರೋಧ ಗಳಿಗೆ ಚಿತ್ರದಲ್ಲೇ ಉತ್ತರ ಸಿಗುತ್ತದೆ ಎಂದರು. ಕಲಾವಿದ ಮಂಜು ಸುವರ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News