ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ

Update: 2024-09-22 13:00 GMT

ಉಡುಪಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ತಾಲೂಕು ಪಂಚಾಯತ್‌ಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ದಸರಾ ಕ್ರೀಡಾಕೂಟ ಎಂಬುದು ಈ ನಾಡಿನ ಹೆಮ್ಮೆಯ ಕ್ರೀಡಾಕೂಟ. ಇದರಲ್ಲಿ ಭಾಗವಹಿಸುವುದೇ ಒಂದು ಗೌರವ. ಕ್ರೀಡೆಯು ನಮ್ಮನ್ನು ಉಲ್ಲಾಸ ಹಾಗೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ಕ್ರೀಡೆ ಎಂಬುದು ಒಂದು ರೀತಿಯ ಮೆಡಿಟೇಷನ್. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಯಾವುದೇ ವಿಚಾರಗಳು ಒತ್ತಡಗಳು ಇರುವುದಿಲ್ಲ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಪ್ರಶಸ್ತಿ ಗಳಿಸುವುದು, ಗೆಲ್ಲುವುದು ಅಲ್ಲ ಆದುದರಿಂದ ಎಲ್ಲರೂ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸ ಬೇಕು ಎಂದು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕ್ರೀಡೆಯಲ್ಲಿ ನಿರಂತರ ತರಬೇತಿ ಪಡೆಯುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯ. ಮೊದಲು ನಮಗೆ ನಾವೇ ಸ್ಪರ್ಧಿಗಳಾಗ ಬೇಕು. ಮುಂದೆ ಬೇರೆಯವರೊಂದಿಗೆ ಸ್ಪರ್ಧೆಗೆ ಇಳಿಯಬೇಕು. ಆಗ ನಾವು ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ತಂಡ ಕ್ರೀಡೆಯಲ್ಲೂ ತಂಡ ಸ್ಫೂರ್ತಿ ಕೂಡ ಮುಖ್ಯವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.

ವೇದಿಕೆಯಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉಡುಪಿ ತಾಲೂಕು ಕ್ರೀಡಾಧಿಕಾರಿ ವಸಂತ್ ಜೋಗಿ, ಕ್ರೀಡಾ ತರಬೇತುದಾರರಾದ ಅನಂತ ರಾಮ್, ರಾಜೇಶ್ ಪತ್ತಾರ್, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಉಡುಪಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರವೀಂದ್ರ ನಾಯಕ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಉಡುಪಿ ಜಿಲ್ಲಾ ಮಟ್ಟದ ಹ್ಯಾಂಡ್‌ಬಾಲ್, ಬಾಸ್ಕೆಲ್ ಬಾಲ್, ಟೇಬಲ್ ಟೇನ್ನಿಸ್ ಹಾಗೂ ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಗಾಗಿ ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಖೋಖೋ ಹಾಗೂ ಅಥ್ಲೆಟಿಕ್ ಸ್ಪರ್ಧೆಗಳು ನಡೆದವು. ಇದರ ಜಿಲ್ಲಾಮಟ್ಟದ ಸ್ಪರ್ಧೆಯು ಸೆ.25ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News